– ಕ್ರೀಡಾ ಖಾತೆ ನೀಡಿರೋದಕ್ಕೆ ತಕರಾರು
ಶಿವಮೊಗ್ಗ: ಸಂಘಟನೆ ಬಿಟ್ಟು ಹೋದವರು ಇಂದು ಯಾರೂ ಯಶಸ್ವಿಯಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಂಘಟನೆ ಮೀರಿ ಬೆಳೆಯಲು ಹೋದವರು ತಾತ್ಕಾಲಿಕವಾಗಿ ಯಶಸ್ವಿಯಾಗುತ್ತಾರೆಯೇ ವಿನಃ ಯಾವುದೇ ಲಾಭವಾಗುವುದಿಲ್ಲ ಎಂದರು.
ಬಿಜೆಪಿಯ ಯಡಿಯೂರಪ್ಪ ಇರಬಹುದು, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಹಾಗೂ ಜೆಡಿಎಸ್‍ನ ಕುಮಾರಸ್ವಾಮಿ ಅವರಿಗೂ ಈ ಮಾತು ಅನ್ವಯವಾಗುತ್ತದೆ. ಸಂಘಟನೆ ಬಿಟ್ಟ ಕಾರಣ ಸಿಎಂ ಯಡಿಯೂರಪ್ಪ ಮೂರು ಮೂವತ್ತು ಅದರು. ಅದೇ ರೀತಿ ಸಂಘಟನೆ ಮೀರಿ ಸಿದ್ದರಾಮಯ್ಯ ನಡೆದುಕೊಂಡ ಪರಿಣಾಮ ಇಂದು ಕಾಂಗ್ರೆಸ್ ನೆಲಕಚ್ಚಿದೆ ಎಂದು ಈಶ್ವರಪ್ಪ ವಿಶ್ಲೇಷಿಸಿದರು.
ಸಿದ್ದರಾಮಯ್ಯ ಕೆಳಗೆ ಬಿದ್ದಿದ್ದಾರೆ ಎಂದು ಇನ್ನೊಂದು ಕಲ್ಲು ಹೊಡೆಯಲು ಇಷ್ಟಪಡಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆ, ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ. ಮಾಜಿ ಸ್ವೀಕರ್ ರಮೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಅವರದ್ದೇ ಪಕ್ಷದ ಮುನಿಯಪ್ಪ ಆರೋಪ ಮಾಡುತ್ತಾರೆ. ಹೀಗಿರುವಾಗ ರಮೇಶ್ ಕುಮಾರ್ ಜೊತೆ ಕುಳಿತುಕೊಂಡೇ ಸಿದ್ದರಾಮಯ್ಯ ಸಭೆ ನಡೆಸುತ್ತಾರೆ ಎಂದರು.
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಖಾತೆ ಜೊತೆಗೆ ಹೆಚ್ಚುವರಿಯಾಗಿ ಕ್ರೀಡಾ ಖಾತೆ ನೀಡಿರುವುದಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ತಕರಾರು ತೆಗೆದಿದ್ದಾರೆ. ನನಗೆ ಕ್ರೀಡಾ ಖಾತೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ. ಸಿಎಂ ಜೊತೆ ಚರ್ಚಿಸಿದ ನಂತರ ಕ್ರೀಡಾ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.