ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಮನ್‍ಸೆನ್ಸ್ ಇಲ್ಲ. ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವ ಪದ ಬಳಸಬೇಕು ಎಂಬ ಜ್ಞಾನವಿಲ್ಲದೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುವುದಕ್ಕೆ ಒಂದು ಭಾಷೆ ಅಂತಿದೆ. ಅಂತಹ ಪದಗಳನ್ನು ಬಳಸಿ ಸಿದ್ದರಾಮಯ್ಯ ಅವರು ಪ್ರಶ್ನಿಸಿಬಹುದಿತ್ತು. ಸಿದ್ದರಾಮಯ್ಯ ಅವರು ಬಳಸುವ ಪದಗಳನ್ನು ಕೇಳಿದಾಗ ಈಡಿ ದೇಶ, ರಾಜ್ಯದಲ್ಲಿ ಇಂತಹ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಆಗಿದ್ರಾ ಎಂಬ ನೋವು ಕಾಡುತ್ತೆ ಎಂದು ಗುಡುಗಿದರು.
ಈಡಿ ದೇಶದಲ್ಲಿ ಜಲ ಪ್ರಳಯ ಆಗಿದೆ. ರಾಜ್ಯಕ್ಕೂ ಸಾಕಷ್ಟು ನೆರೆ ಪರಿಹಾರ ಹಣ ಬಂದಿದೆ. ಇನ್ನೂ ಹಣ ಬರಬೇಕು, ಬರಬೇಕು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಪ್ರಧಾನಿ ಮೋದಿ ಅವರ ಬಳಿ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ನೆರೆ ಪರಿಹಾರದ ಹಣ ಪಿಡುಗಡೆ ಮಾಡಿಲ್ಲ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವರು ಬಳಸುವ ಭಾಷೆ ಸರಿಯಿಲ್ಲ. ಅವರು ಅವಧಿಯಲ್ಲಿ ಕೇಂದ್ರದಲ್ಲೂ ಅವರದ್ದೇ ಸರ್ಕಾರ ಇತ್ತು. ರಾಜ್ಯದಲ್ಲಿ ಬರಗಾಲ ಬಂದಾಗ ಎಷ್ಟು ಹಣ ಕೊಟ್ಟಿದ್ದರು ಎಂಬುದು ನಮಗು ಗೊತ್ತಿದೆ ಎಂದು ಕುಟುಕಿದರು.
ಸಿದ್ದರಾಮಯ್ಯ ಅವರಿಗೆ ಈಗ ನಿರಾಶೆ ಆಗಿದೆ. ಸರ್ಕಾರ ಕಳೆದುಕೊಂಡಿದ್ದೇವೆ, ಮುಖ್ಯಮಂತ್ರಿ ಸ್ಥಾನ ಹೋಯ್ತು, ಇನ್ನು ಬೇರೆ ಗತಿ ಇಲ್ಲದೇ ಎಂಬ ಭಾವನೆ ಅವರಲ್ಲಿ ಮೂಡಿದೆ. ಹೀಗಾಗಿ ಈ ರೀತಿಯ ಪದ ಬಳಕೆ ಮಾಡುತ್ತಿದ್ದಾರೆ. ನೆರೆ ಪರಿಹಾರದ ಹಣವನ್ನು ಆದಷ್ಟು ಬೇಗ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ನಾನು ಕೂಡ ಒತ್ತಾಯಿಸುತ್ತೇನೆ ಎಂದರು.
ಇದೇ ವೇಳೆ ಪ್ರಧಾನಿ ಮೋದಿ ಅವರು ವಿಭೂತಿ ಹಚ್ಚಿಕೊಂಡು, ರುದ್ರಾಕ್ಷಿ ಹಾಕಿಕೊಂಡ ವಿಚಾರವಾಗಿ ಟೀಕೆ ಮಾಡಿದವರಿಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದರು. ನಿಮಗೆ ದೇವರು, ಧರ್ಮದ ಬಗ್ಗೆ ನಂಬಿಕೆ ಇಲ್ಲ. ಹಾಗಾಗಿ ನೀವು ಹಾಳಾಗಿ ಹೋಗಿದ್ದೀರಿ. ನಮಗೆ ದೇವರು, ಧರ್ಮದ ಬಗ್ಗೆ ನಂಬಿಕೆ ಇದೆ. ದೇವರು ಹಾಗೂ ಧರ್ಮವನ್ನು ನಾವು ಇನ್ನೂ ಹೆಚ್ಚು ಉಳಿಸುತ್ತೇವೆ. ಈ ಮೂಲಕ ದೇಶವನ್ನು ಉದ್ದಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.