ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬ ನಂಬಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಸಮಾಧಾನದಿಂದ ಇದ್ದರು. ಆದರೆ, ಸಿಎಂ ಸಮಾಧಾನಕ್ಕೆ ಕೊಳ್ಳಿ ಇಡುವಂತ ವರದಿಯನ್ನು ಅವರದೇ ಸರ್ಕಾರದ ಸಂಸ್ಥೆಯಾದ ಗುಪ್ತಚರ ಇಲಾಖೆ ನೀಡಿದೆ. ಅಂದರೆ ಮಧು ಗೆಲವು ಅಷ್ಟು ಸಲೀಸಲ್ಲ, ಬಿಜೆಪಿಯ ರಾಘವೇಂದ್ರ ಗೆಲುವಿನ ಹತ್ತಿರ ಇದ್ದಾರೆ ಎಂಬ ವರದಿಯನ್ನು ಇಂಟಲಿಜೆನ್ಸ್ ವಿಭಾಗ ಸಿಎಂಗೆ ನೀಡಿದೆ ಎಂದು ತಿಳಿದು ಬಂದಿದೆ.
ಗುಪ್ತಚರ ಇಲಾಖೆ ನೀಡಿದ ವರದಿಯಿಂದ ಸಮಾಧಾನಗೊಳ್ಳದ ಸಿಎಂ ಕುಮಾರಸ್ವಾಮಿ ಈಗ ಖಾಸಗಿ ಏಜೆನ್ಸಿಯೊಂದರ ಮೂಲಕ ಮತ್ತೊಮ್ಮೆ ಅಮೂಲಾಗ್ರವಾಗಿ ಸಮೀಕ್ಷೆ ನಡೆಸಿ ವರದಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಈ ವರದಿ ಮೈತ್ರಿ ಅಭ್ಯರ್ಥಿಗೆ ವಿರುದ್ಧವಾಗಿದ್ದಲ್ಲಿ ಮುಂದೆ ಸಮ್ಮಿಶ್ರ ಸರ್ಕಾರದ ಮೇಲಾಗುವ ಪರಿಣಾಮಗಳು, ಅವುಗಳ ನಿರ್ವಹಣೆ ಬಗ್ಗೆ ಕುಮಾರಸ್ವಾಮಿ ಈಗಲೇ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಫಲಿತಾಂಶ ನೇರವಾಗಿ ಮುಖ್ಯಮಂತ್ರಿ ಗಾದಿಗೇ ತೊಂದರೆ ತಂದೊಡ್ಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಿಲಾಕ್ಸ್ ಗಾಗಿ ರೆಸಾರ್ಟ್ ತಲುಪಿರುವ ಕುಮಾರಸ್ವಾಮಿ ಅವರ ದೇಹ ಅಲ್ಲಿದ್ರೆ, ಮನಸ್ಸು ಇನ್ನೆಲ್ಲೋ ಇದೆ ಎಂಬಂತಾಗಿದೆ. ಫಲಿತಾಂಶದ ಹೊರತಾಗಿ ಸಿಎಂ ತಲೆಯಲ್ಲಿ ಬೇರೆ ಯಾವ ಚಿಂತನೆಯೂ ಬರಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
ಶಿವಮೊಗ್ಗ ಕ್ಷೇತ್ರದಲ್ಲಿ ನಿಜಕ್ಕೂ ಸ್ಪರ್ಧೆ ಇದ್ದದ್ದು ಮೈತ್ರಿ ಸರ್ಕಾರ ಹಾಗೂ ಯಡಿಯೂರಪ್ಪ ನಡುವೆ. ಇಲ್ಲಿ ಬಿಜೆಪಿಯ ರಾಘವೇಂದ್ರ, ಸಮ್ಮಿಶ್ರ ಅಭ್ಯರ್ಥಿ ಜೆಡಿಎಸ್ ನ ಮಧು ಬಂಗಾರಪ್ಪ ನೆಪ ಮಾತ್ರ. ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಸೋತಲ್ಲಿ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸುವಂತ ಪ್ರಯತ್ನಕ್ಕೆ ಕೈಹಾಕುವ ಇನ್ನೊಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ. ಗೆದ್ದರೆ, ಸಮ್ಮಿಶ್ರ ಸರ್ಕಾರಕ್ಕೆ ಮತ್ತೆ ಅನಿಶ್ಚತತೆ ಖಂಡಿತಾ. ಇದೇ ಕಾರಣಕ್ಕೆ ದೇವೇಗೌಡರ ಹಾಗೂ ಡಿಕೆ ಶಿವಕುಮಾರ್ ಸಕುಟುಂಬ ಪರಿವಾರ ಸಮೇತ ಶಿವಮೊಗ್ಗದಲ್ಲೇ ಇದ್ದು, ತಮ್ಮೆಲ್ಲಾ ಸಾಮರ್ಥ್ಯವನ್ನು ಧಾರೆ ಎರೆದಿದ್ದಾರೆ. ಯಾವ ವರದಿ ಏನೇ ಹೇಳಲಿ ಮೇ 23ರವರೆಗೆ ಕಾಯುವುದು ಅನಿವಾರ್ಯ.
Advertisement
2014ರ ಚುನಾವಣೆಯಲ್ಲಿ ಶೇ.72.3 ಮತದಾನ ನಡೆದಿದ್ದರೆ ಈ ಬಾರಿ ಶೇ.76.40 ಮತದಾನ ನಡೆದಿದೆ. ಶಿವಮೊಗ್ಗ ಗ್ರಾಮೀಣದಲ್ಲಿ ಶೇ.80.28, ಭದ್ರಾವತಿ ಶೇ.69.56, ಶಿವಮೊಗ್ಗ ಶೇ.67.59, ತೀರ್ಥಹಳ್ಳಿ ಶೇ.80.39, ಶಿಕಾರಿಪುರ ಶೇ.80.64, ಸೊರಬ ಶೇ.82.59, ಸಾಗರ ಶೇ.78.78, ಬೈಂದೂರಿನಲ್ಲಿ ಶೇ.75.26 ರಷ್ಟು ಮತದಾನ ನಡೆದಿತ್ತು.