ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತು ಮಗುವನ್ನು ಬಾವಿಗೆ ಎಸೆದು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಹಾರಿದ್ದ ತಾಯಿ ಚೈತ್ರಾಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಆದರೆ ಕೌಶಿಕ್(3) ಸಾವನ್ನಪ್ಪಿದ್ದಾನೆ. ತನ್ನ ಪತಿಯೊಂದಿಗೆ ಜಗಳವಾಡಿಕೊಂಡಿದ್ದ ಚೈತ್ರಾ ಬೀರನಕೆರೆಯಲ್ಲಿರುವ ತನ್ನ ತಾಯಿ ಮನೆಗೆ ಬಂದು ಉಳಿದುಕೊಂಡಿದ್ದಳು. ಇಂದು ಬೆಳಿಗ್ಗೆ ಮಗುವನ್ನು ನೋಡಿಕೊಂಡು ಹೋಗಲು ಬಂದಿದ್ದ ಪತಿ ಮಗುವಿಗೆ ತಿಂಡಿ ಕೊಡಿಸಿ, ಚೈತ್ರಾಗೆ ಬುದ್ಧಿವಾದ ಹೇಳಿ ತನ್ನ ಕೆಲಸಕ್ಕೆ ತೆರಳಿದ್ದನು. ಬಳಿಕ ಸಿಟ್ಟಿನಿಂದ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡು ಚೈತ್ರ ಮಗುವನ್ನು ಎತ್ತಿಕೊಂಡು ಹೋಗಿ ಬಾವಿಗೆ ಹಾರಿದ್ದಾಳೆ. ಇದನ್ನೂ ಓದಿ:ನಿಶ್ಚಿತಾರ್ಥ ಜೋಡಿಯಿಂದ ಬಾವಿಯ ಮೆಟ್ಟಿಲಿನಲ್ಲಿ ಪ್ರಿ ವೆಡ್ಡಿಂಗ್ ಸೆಲ್ಫಿ – ಆಯತಪ್ಪಿ ಬಿದ್ದು ಯುವತಿ ಸಾವು
ಮಗುವನ್ನು ಮೊದಲು ಬಾವಿಗೆ ಎಸೆದು ನಂತರ ತಾನು ಹಾರಿದ್ದಾಳೆ. ಇದನ್ನ ಕಂಡ ತಾಯಿ ಅಕ್ಕಪಕ್ಕದವರನ್ನು ಕೂಗಿ ಸಹಾಯಕ್ಕೆ ಕರೆದಿದ್ದಾರೆ. ತಕ್ಷಣವೇ ಸ್ಥಳಿಯರು ಬಂದು ಬಾವಿಗೆ ಹಾರಿ ಚೈತ್ರಾಳನ್ನು ರಕ್ಷಿಸಿದ್ದಾರೆ. ಆಗ ಮಗು ಕೂಡ ಬಾವಿಯಲ್ಲಿದೆ ಎಂದು ಚೈತ್ರ ಹೇಳಿದಾಗ ಮತ್ತೆ ಸ್ಥಳೀಯರು ಬಾವಿಗೆ ಇಳಿದು ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಮಗು ನೀರಿನಲ್ಲಿ ಉಸಿರುಗಟ್ಟಿ ಸಾವನಪ್ಪಿದೆ.