ಶಿವಮೊಗ್ಗ: ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ನೆರೆ ಹಾವಳಿಗೆ ಜನರು ಮನೆಮಠ ಕಳೆದುಕೊಂಡು ತತ್ತರಿಸಿ ಹೋಗಿದ್ದರು. ಜಿಲ್ಲೆಯ ಸಾಗರ ತಾಲೂಕಿನಲ್ಲೂ ಸಹ ಕೆಲವು ಕುಟುಂಬಗಳು ನೆರೆ ಹಾವಳಿಗೆ ಸಿಲುಕಿದ್ದವು. ಹೀಗಾಗಿ ಸಂತ್ರಸ್ತರಿಗೆ ವಿತರಿಸಲು ಕೆಲವು ದಾನಿಗಳು ನೀಡಿದ್ದ ಅಗತ್ಯವಸ್ತುಗಳನ್ನು ಹಂಚದೆ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಸುರಿದ ವಿಪರೀತ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ವಿತರಿಸಲು ಬೆಂಗಳೂರಿನ ಎಂ.ಎಸ್ ರಾಮಯ್ಯ ಡೆವಲಪರ್ಸ್ ಮತ್ತು ಬಿಲ್ಡರ್ ಸೇರಿದಂತೆ ಇತರೆ ದಾನಿಗಳು ನೀಡಿದ ವಸ್ತುಗಳು ಸಂತ್ರಸ್ತರಿಗೆ ತಲುಪದೇ ಇಲ್ಲಿನ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದ ಗೋದಾಮಿನಲ್ಲಿ ಧೂಳು ಹಿಡಿಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
Advertisement
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾನಿಗಳು ಯಾವ ಉದ್ದೇಶಕ್ಕೆ ದೇಣಿಗೆ ನೀಡಿರುತ್ತಾರೆಯೋ ಅದನ್ನು ಸದುದ್ದೇಶಕ್ಕೆ ಬಳಸಿಕೊಳ್ಳಬೇಕಾದದ್ದು ಆಡಳಿತ ನಡೆಸುತ್ತಿರುವವರ ಧರ್ಮವಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ವಿಪರೀತ ಮಳೆ ಸುರಿದಿದೆ. ನೆರೆಯಿಂದ ಸಾಕಷ್ಟು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದವು. ಇದನ್ನು ಗಮನಿಸಿದ ದಾನಿಗಳು ಸಂತ್ರಸ್ತರಿಗೆ ಅನುಕೂಲವಾಗಲಿ ಎಂದು ಅಕ್ಕಿ, ಬಟ್ಟೆ, ಔಷಧಿ, ರೈನ್‍ಕೋಟ್, ಟೂಥ್‍ಪೇಸ್ಟ್, ಬಿಸ್ಕೇಟ್, ಬ್ಲಾಂಕೆಟ್, ಪಾತ್ರೆಯನ್ನು ನೀಡಿದ್ದಾರೆ. ಆದರೆ ಇದನ್ನು ಸಂತ್ರಸ್ತರಿಗೆ ಹಂಚದೆ ಗೋದಾಮಿನಲ್ಲಿಯೇ ಇರಿಸಿರುವುದರಿಂದ ಅದು ಸಂಪೂರ್ಣ ಹಾಳಾಗಿದೆ. ಅಕ್ಕಿಯಲ್ಲಿ ಹುಳ ಆಗಿದೆ. ಔಷಧಿ ಮಾತ್ರೆಗಳ ದಿನಾಂಕ ಮುಗಿದಿದೆ. ಹೊಸ ಬಟ್ಟೆಗಳು ಎಂಟು-ಹತ್ತು ತಿಂಗಳಿನಿಂದ ಒಂದೆ ಕಡೆ ಇರಿಸಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಇದು ಅಧಿಕಾರ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾಡಿದರು.
Advertisement
Advertisement
ಇದು ಯಾರು ಕೊಟ್ಟಿದ್ದು? ಯಾರಿಗೆ ತಲುಪಿಸಬೇಕಾಗಿತ್ತು? ಎಷ್ಟು ಬಂದಿದೆ? ಎಷ್ಟು ಕೊಟ್ಟಿದ್ದಾರೆ ಎನ್ನುವ ಯಾವ ಮಾಹಿತಿಯೂ ಇಲ್ಲ. ಇಲ್ಲಿ ವಸ್ತುವಿನ ಬೆಲೆಗಿಂತ ಮಾನವೀಯತೆಯ ಪ್ರಶ್ನೆಯೇ ಪ್ರಮುಖವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಸಂದರ್ಭ ಬಂದರೆ ಸರ್ಕಾರದ ಗಮನ ಸಹ ಸೆಳೆಯಲಾಗುತ್ತದೆ. ಈ ಸಂಬಂಧ ಸೂಕ್ತ ತನಿಖೆಗೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದರು.