ಶಿವಮೊಗ್ಗ: ಮನೆಯಂಗಳದಲ್ಲಿ ಒಣ ಹಾಕಿದ್ದ ಬಟ್ಟೆಗೆ ಹಾಗೂ ಹಿತ್ತಲಲ್ಲಿ ಇರುವ ಪ್ಲಾಸ್ಟಿಕ್ ಡ್ರಮ್ ಇದ್ದಕ್ಕಿದ್ದಂತೆ ಧಗಧಗನೇ ಹೊತ್ತಿ ಉರಿಯುತ್ತಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಹೊಸನಗರ ತಾಲೂಕು ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರಿಮನೆ ಎಂಬಲ್ಲಿ ಈ ಘಟನೆ ನಡೆದಿದೆ. ಮನೆ ಮುಂದಿನ ಗಿಡಗಳ ಪೊದೆಯಲ್ಲಿ ತಟ್ಟನೆ ಬೆಂಕಿ ಕಾಣಿಸಿಕೊಳ್ತಿದೆ. ಗಿಡ-ಬಟ್ಟೆ-ಹುಲ್ಲು ಅಷ್ಟೇ ಅಲ್ಲ- ಖಾಲಿ ಮಣ್ಣಿನ ಮೇಲೂ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ತಿದೆ. ಕಳೆದ ಮೂರು ದಿನಗಳಿಂದ ಇಂಥ ಬೆಂಕಿ ಚೇಷ್ಟೆಯಿಂದಾಗಿ ಜನ ಗಾಬರಿಗೊಂಡಿದ್ದಾರೆ.
ಮಲೆನಾಡಿನ ಈ ಗ್ರಾಮದಲ್ಲಿ ಒಂಟಿ ಮನೆಗಳೇ ಇವೆ. ಕಳೆದ ಬುಧವಾರ ಈ ಗ್ರಾಮದ ಲೋಲಾಕ್ಷಿ ಎಂಬವರ ಮನೆಯಂಗಳದಲ್ಲಿ ಒಣ ಹಾಕಿದ್ದ ಬಟ್ಟೆಗಳಿಗೆ ಬೆಂಕಿ ಹತ್ತಿತ್ತು. ನಂತರ ರತ್ನಮ್ಮ ಎಂಬವರ ಮನೆಯ ಅಂಗಳದ ಮೂರ್ನಾಲ್ಕು ಕಡೆ ಬೆಂಕಿ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ ತೋಟಪ್ಪ ಗೌಡ ಎಂಬವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಈ ಬೆಂಕಿಯನ್ನು ನಂದಿಸಲು ಮಧ್ಯರಾತ್ರಿಯವರೆಗೂ ಶ್ರಮಪಟ್ಟಿದ್ದಾರೆ.
ಮೊದಲು ನೀರಿನ ಡ್ರಮ್ ಬಳಿ, ಹುಲ್ಲಿನ ಬಳಿ, ಬಳಿಕ ಇದ್ದಕ್ಕಿದ್ದಂತೆ ಮಣ್ಣಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಇದರಿಂದ ಸ್ಥಳೀಯರಾದ ನಾವೆಲ್ಲ ತುಂಬಾನೇ ಭಯಭೀತರಾಗಿದ್ದೇವೆ. ಯಾಕಂದ್ರೆ ನಾವು ಸಾಮಾನ್ಯವಾಗಿ ಮೂಢನಂಬಿಕೆಗೆ ಆಸ್ಪದ ಕೊಡಲ್ಲ. ಆದ್ರೆ ಈ ಘಟನೆ ಸ್ವಲ್ಪ ವಿಶೇಷವಾಗಿದ್ದು, ಹೀಗಾಗಿ ಮೂಢನಂಬಿಕೆಯನ್ನು ನಂಬಬೇಕೋ ಬೇಡವೋ ಅನ್ನೋ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಸುಮಾರು 8 ಕಡೆ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ನಾವು ಬಹಳ ಆತಂಕದಲ್ಲಿದ್ದೇವೆ ಎಂದು ಗ್ರಾಮಸ್ಥ ಸತೀಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv