ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ದ ಕೆಪಿಸಿಸಿ ವೀಕ್ಷಕರ ಸಮ್ಮುಖದಲ್ಲೇ ಹಾಲಿ ಶಾಸಕರ ಬೆಂಬಲಿಗರು ಹಾಗೂ ವಿರೋಧಿ ಗುಂಪು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.
ಜಿಲ್ಲೆಯಲ್ಲಿರುವ ಏಳೂ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ವೀಕ್ಷಕರಾದ ಮಾಜಿ ಎಂಪಿ ಚಂದ್ರಕಾಂತ ಕುನ್ನುರ ಹಾಗೂ ಹಾಲಿ ಎಂಪಿ ಚಂದ್ರಪ್ಪ ಇಂದು ಅಗಮಿಸಿದ್ದರು. ಈ ಸಂದರ್ಭದಲ್ಲಿ ಒಂದು ಗುಂಪು ಹಾಲಿ ಎಂಎಲ್‍ಎ ಪ್ರಸನ್ನ ಕುಮಾರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್ ಕಚೇರಿ ಪ್ರವೇಶಿಸಿತ್ತು. ಈ ವೇಳೆ ಪ್ರಸನ್ನ ಕುಮಾರ್ ಪರ ಘೋಷಣೆ ಕೂಗುತ್ತಿದ್ದ ಬೆಂಬಲಿಗರು ಏಕಾಏಕಿ ವಿರೋಧಿ ಬಣದ ಮೇಲೆ ಮುಗಿಬಿದ್ದರು. ಅವರ ಕೈಯಲಿದ್ದ ಪ್ಲೇ ಕಾರ್ಡ್ ಗಳನ್ನು ಕಿತ್ತು ಹಲ್ಲೆ ನಡೆಸಿದರು.
ಕಾಂಗ್ರೆಸ್ ಮುಖಂಡರ ಮುಂದೆಯೇ ಹಾಲಿ ಶಾಸಕರ ಬೆಂಬಲಿಗರು ದಾಳಿ ನಡೆಸಿದ ಪರಿಣಾಮ ವಿರೋಧಿ ಗುಂಪು ದಿಕ್ಕಾಪಾಲಾಗಿ ಓಡಿದೆ. ಈ ವೇಳೆ ವಿರೋಧಿ ಪಡೆಯಲ್ಲಿದ್ದ ಒಬ್ಬ ವಯೋವೃದ್ಧರ ಮೇಲೂ ಈ ಗುಂಪು ದಾಳಿ ಮಾಡಿದೆ.
ಘಟನೆಯನ್ನು ಕಾಂಗ್ರೆಸ್ ನಾಯಕ ಸತ್ಯನಾರಾಯಣ ರಾವ್ ಸೇರಿದಂತೆ ಹಲವು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ವೀಕ್ಷಕ ಚಂದ್ರಪ್ಪ, ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿ ವಿಷಾದ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=y3Zf-x5X_Zo