ಶಿವಮೊಗ್ಗ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಬಳಗದ ಸದಸ್ಯರು ಹಸಿದವರಿಗೆ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ. ಶಿವಕುಮಾರ್ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದ್ದು, ಈ ಸಂಚಾರಿ ಕ್ಯಾಂಟೀನ್‍ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದು ಚಾಲನೆ ನೀಡಿದರು. ಈ ಸಂಚಾರಿ ಕ್ಯಾಂಟೀನ್ ನಗರದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸ್ಟಾಪ್, ನರ್ಸ್, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್ ಹಾಗೂ ನಗರದಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ.ಶಿ. ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದೆ.
ಪ್ರತಿ ದಿನಕ್ಕೆ 500 ರಿಂದ 600 ಜನರಿಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ಹಸಿದವರಿಗೆ ಈ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಸೇವೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಉಪಹಾರದ ಜೊತೆಗೆ ನೀರಿನ ಬಾಟಲಿಯನ್ನು ಕೂಡ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ.
ಈ ಕ್ಯಾಂಟೀನ್ ಫೋನ್ ನಂ.ಗೆ ಒಂದು ಕರೆ ಮಾಡಿದರೆ ಸಾಕು ಉಚಿತವಾಗಿ, ಆಹಾರ ಮತ್ತು ನೀರನ್ನು ಒದಗಿಸುವ ಸೇವೆ ಇಂದಿನಿಂದ ಆರಂಭಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡ ದೇವೆಂದ್ರಪ್ಪ ನೇತೃತ್ವದಲ್ಲಿ ಈ ಸಂಚಾರಿ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ.