ಶಿವಮೊಗ್ಗ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಿಂದ ಇಂದು ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ರಾಷ್ಟ್ರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಮಾನ್ಯ ಮಾಡಲೇ ಬೇಕು ಹಾಗೂ ಅದಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದೆ. ಮುಸ್ಲಿಮರಿಗೆ ಪ್ರತ್ಯೇಕ ಮಸೀದಿ ನಿರ್ಮಾಣಕ್ಕೂ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.
Advertisement
Advertisement
ಮನವಿಯೇನು?
ಇದು ನ್ಯಾಯಸಮ್ಮತವಾದ ತೀರ್ಪು. ಇದೇ ಅಂತಿಮ ತೀರ್ಪು, ಇದಕ್ಕಿಂತ ತೀರ್ಪು ಮುಂದೆ ಇಲ್ಲ. ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೆಯೋ ಗೊತ್ತಿಲ್ಲ. ನಾವು ಸೇವಿಸುವ ತರಕಾರಿಯನ್ನು ಹಿಂದೂ ಬೆಳೆದಿದ್ದಾನಾ, ಮುಸಲ್ಮಾನ ಅಥವಾ ಕ್ರೈಸ್ತ ಬೆಳೆದಿದ್ದಾನೆಯೋ ಗೊತ್ತಿಲ್ಲ. ಅದೇ ರೀತಿ ಹಾಲು-ನೀರು ಬೆರೆತಂತೆ ಸಮಾಜ ಇರಬೇಕು. ತೀರ್ಪಿನಿಂದ ಯಾರೂ ಚಂಚಲ ಆಗಬಾರದು. ತೀರ್ಪಿನ ನಂತರ ಸಾಮರಸ್ಯದಿಂದ ಬದುಕಬೇಕು. ಈ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳೋಣ ಎಂದು ಹೆಗ್ಗಡೆಯವರು ರಾಷ್ಟ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಭಾರತ ವಿಕಾಸದ ದಿಕ್ಕಲ್ಲಿ ಓಡುತ್ತಿದೆ, ಹಿಂದೂ-ಮುಸಲ್ಮಾನರು ಒಗ್ಗೂಡಿ ದೇಶ ಕಟ್ಟೋಣ: ಸೂಲಿಬೆಲೆ
Advertisement
ತೀರ್ಪಿನ ಪ್ರಮುಖ ಅಂಶಗಳು:
ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.
Advertisement
ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.
ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. 2ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಕೇವಲ ಪುರಾತತ್ವ ಸಾಕ್ಷ್ಯವನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ. ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡುತ್ತೇವೆ. 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1856 ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.
ಮಸೀದಿಯ ಕೆಳಗಡೆ ಹಿಂದೂ ರಚನೆ ಇದೆ ಅಂತ ನಂಬಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕಿಸಿ ಬೇಲಿ ಹಾಕಿಸಿದ್ದರು. ಮಸೀದಿಯ ಒಳಗೆ ಮುಸ್ಲಿಮರು, ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು.
ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾರದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾರಕ್ಕೆ ಪ್ರಾತಿನಿಧ್ಯ ನೀಡಬೇಕು.