ಶಿವಮೊಗ್ಗ: ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದ ಒಳಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಎಲ್ಲಾ ಯೋಜನೆಗಳ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಡಿಸಿ ಪ.ಜಾತಿ/ಪಂಗಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದು ಕಾರ್ಯಕ್ರಮ ಅನುಷ್ಠಾನದ ಹಂತದಲ್ಲಿದೆ. ಆದರೆ ಇನ್ನೂ ಫಲಾನುಭವಿಗಳ ಆಯ್ಕೆ ಮಾಡದೇ ಇರುವ ಇಲಾಖೆಗಳು ತಕ್ಷಣ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ವರದಿ ನೀಡಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ನೀಡುವ ಯೋಜನೆ ಹೊಂದಿರುವ ನಿಗಮ ಮಂಡಳಿಗಳು ಫೆಬ್ರವರಿ ಅಂತ್ಯದ ಒಳಗಾಗಿ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್‍ಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗುರಿ ಸಾಧಿಸದ ಇಲಾಖೆಗಳಿಗೆ ನೊಟೀಸ್:
ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ನಿಗದಿತ ಗುರಿಯನ್ನು ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಜನವರಿ ಕೊನೆಯ ಒಳಗೆ ನಿಗದಿತ ಗುರಿಯನ್ನು ಸಾಧಿಸದಿರುವ ಇಲಾಖೆಗಳಿಗೆ ನೊಟೀಸ್ ಜಾರಿಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ಅನುಷ್ಠಾನ ಮಂದಗತಿಯಲ್ಲಿದ್ದು, ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.