– ಭ್ರಷ್ಟಾಚಾರಿಗಳಿಗೆ ಜಾತಿ ಎಂಬುದಿಲ್ಲ
ಶಿವಮೊಗ್ಗ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇರುವ ಸತ್ಯ ಹೇಳಿದರೆ ಇಡಿಯವರು ಸಮಾಧಾನವಾಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಡಿ ಅಧಿಕಾರಿಗಳಿಗೆ ಡಿಕೆಶಿ ಅವರಿಂದ ಸಮಗ್ರ ಮಾಹಿತಿ ಸಿಕ್ಕಿಲ್ಲ ಅನಿಸುತ್ತೆ. ಸತ್ಯ ಹೇಳುವುದಕ್ಕೆ ಬಹಳ ಸಮಯ ಬೇಡ, ಬಹಳ ಎಳೆದುಕೊಂಡು ಹೋದರೆ ಒಳ್ಳೆಯದು ಅಲ್ಲ ಎಂದರು.
ಇಡಿ ತನಿಖೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯ ವಿಚಾರಣೆಯ ಅವಧಿಯನ್ನು ವಿಸ್ತರಣೆ ಮಾಡಿದೆ. ಇದರಲ್ಲಿ ಬಿಜೆಪಿಯ ಯಾವುದೇ ಹಸ್ತಕ್ಷೇಪ ಇಲ್ಲ. ಇರುವ ಸತ್ಯವನ್ನು ಹೇಳಿದರೆ ಇಡಿಯವರು ಸಮಾಧಾನವಾಗುತ್ತಾರೆ. ಅಲ್ಲದೇ ಇಡಿ ತನಿಖೆ ತಪ್ಪಿಸಿಕೊಂಡು ಮುಂದಿನ ತನಿಖೆಗೆ ಸಿದ್ಧವಾಗಬಹುದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಭ್ರಷ್ಟಾಚಾರಿಗಳಿಗೆ ಜಾತಿ ಎಂಬುದಿಲ್ಲ. ಸಮುದಾಯದ ಹಿತ, ಸಮಾಜದ ಹಿತ ಬಯಸಿ ಕೆಲಸ ಮಾಡಿರುವವರನ್ನು ಜನತೆ ನೇತಾರ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಭಟ್ಟಂಗಿಗಳು ಹೊಗಳುವವರನ್ನು, ದುಡ್ಡು ಇದೆ ಎನ್ನುವ ಕಾರಣಕ್ಕೆ ಭವಿಷ್ಯದಲ್ಲಾಗಲಿ, ವರ್ತಮಾನದಲ್ಲಾಗಲಿ ನೇತಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.