ಶಿವಮೊಗ್ಗ: ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಹಲವಾರು ಪ್ರಕರಣಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಒಂದೊಂದು ಪ್ರಕರಣಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಕೆಲವೊಂದು ಪ್ರಕರಣಗಳು ವಿಶೇಷವಾದರೆ, ಇನ್ನು ಕೆಲವು ಪ್ರಕರಣಗಳು ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ನ್ಯಾಯಾಲಯ ತೀರ್ಪು ನೀಡಿದೆ.
ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಈ ಹಿಂದೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ವಿರುದ್ಧದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೇವಲ 1 ರೂ.ಗೆ ಮಾನನಷ್ಟ ಕೋರಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ತೀರ್ಪು ನೀಡಿದೆ.
Advertisement
2014ರಲ್ಲಿ ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಪ್ರಸ್ತುತ ಕೆಪಿಸಿಎಲ್‍ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೊನ್ನುರಾಜ್ ಅವರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಅಧಿಕಾರಿ ಪೊನ್ನುರಾಜ್ ಅವರಿಗೆ ಹಿನ್ನೆಡೆಯಾಗಿದೆ.
Advertisement
ಏನಿದು ಪ್ರಕರಣ?:
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ವಿನೋಬನಗರ ನಿವಾಸಿ ಕೆ.ಶಿವಪ್ಪ ಅವರು ಐಎಎಸ್ ಅಧಿಕಾರಿ ಪೊನ್ನುರಾಜ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿ ರಾಜ್ಯದ ಗಮನ ಸೆಳೆದಿದ್ದರು. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಪೊನ್ನುರಾಜ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಪೊನ್ನುರಾಜ್ ಅವರು ತಮ್ಮ ವಿರುದ್ಧ ಮಾನನಷ್ಟ ದಾವೆ ಹೂಡಿದ್ದ ಕೆ. ಶಿವಪ್ಪರಿಗೆ ಪೊನ್ನುರಾಜ್ 1 ರೂ. ಪರಿಹಾರ ನೀಡಬೇಕಾಗಿದೆ.
Advertisement
Advertisement
ಕೆ. ಶಿವಪ್ಪ ವಿರುದ್ಧ 2011ರ ಏಪ್ರಿಲ್ 5ರಂದು ಶಿವಮೊಗ್ಗದವರೇ ಆದ ಎ.ಎಂ.ಮಹದೇವಪ್ಪ ಎಂಬವರು ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವರಿಗೆ ದೂರು ನೀಡಿದ್ದರು. ಕೆ.ಶಿವಪ್ಪ ಅವರು ನಿವೃತ್ತರಾಗಿದ್ದರೂ ಕಂದಾಯ ಇಲಾಖೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕ ವ್ಯವಹಾರಕ್ಕೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಪೊನ್ನುರಾಜ್ ಅವರು ಈ ದೂರಿನ ಬಗ್ಗೆ ವಿಚಾರಣೆ ನಡೆಸದೇ ಶಿವಪ್ಪ ಅವರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೇ ಆದೇಶವೊಂದನ್ನು ಹೊರಡಿಸಿದ್ದರು. ಅದರ ಪ್ರಕಾರ, ಶಿವಪ್ಪ ಅವರು ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಲಾಗಿತ್ತು. ಆದೇಶ ಪ್ರತಿಗಳನ್ನು ಆಯಾ ಇಲಾಖೆ ನೋಟಿಸ್ ಬೋರ್ಡ್ ಗಳಲ್ಲಿಯೂ ಪ್ರಕಟಿಸಲಾಗಿತ್ತು. ತಮ್ಮ ಅರಿವಿಗೆ ಬಾರದೇ ಸುತ್ತೋಲೆ ಹೊರಡಿಸಿ ನಿರ್ಬಂಧಿಸಿದ್ದರ ವಿರುದ್ಧ ಕೆ.ಶಿವಪ್ಪ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆಗ ಪ್ರತಿವಾದ ಮಾಡುವ ಬದಲಾಗಿ ತಮ್ಮ ಸುತ್ತೋಲೆಯನ್ನು ಬೇಷರತ್ ಆಗಿ ಪೊನ್ನುರಾಜ್ ಹಿಂಪಡೆದಿದ್ದರು. ಈ ಸುತ್ತೋಲೆ ಹಿನ್ನೆಲೆಯಲ್ಲಿ ತಮಗೆ ಮಾನನಷ್ಟವಾಗಿದೆ. ಅಲ್ಲದೇ ಸುತ್ತೋಲೆ ಪರಿಣಾಮ ತಮ್ಮ ವ್ಯವಹಾರಿಕ ಬದುಕಿನ ಮೇಲೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ ಎಂದು ಶಿವಪ್ಪ ಅವರು ಹೇಳಿದ್ದರು. ಆದರೆ ಅವರು 25 ಲಕ್ಷ ರೂ.ಗೆ ಬದಲಾಗಿ ಕೇವಲ 1 ರೂ.ಗೆ ಸೀಮಿತಗೊಳಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡ ಮಾನ್ಯ 3ನೇ ಜೆಎಂಎಫ್‍ಸಿ ನ್ಯಾಯಾಲಯವು, ಪೊನ್ನುರಾಜ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿವಪ್ಪ ಅವರಿಗೆ 60 ದಿನದ ಒಳಗೆ 1 ರೂ. ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.