ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿದ್ದಾರೆ. ಈ ರೀತಿ ನಮ್ಮ ಸರ್ಕಾರ ಬಂದ ಮೇಲೂ ಕೊಲೆ ಆಗಿರೋದು ನನಗೆ ನಾಚಿಕೆ ತರುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಪ್ರತಿ ಹತ್ಯೆ ಆದಾಗಲೂ ಸಿದ್ದರಾಮಯ್ಯ ರನ್ನು ಬೈಯುತ್ತಿದ್ದೆವು. ಇವತ್ತು ನಮ್ಮದೇ ಸರ್ಕಾರ ಇದೆ. ನಮ್ಮ ಕಾರ್ಯಕರ್ತ ಒಬ್ಬ ಹತ್ಯೆ ಆಗಿದ್ದಾನೆ. ಇದು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಜಬ್ ವಿಚಾರ ಬಂದಾಗ ರಾಜ್ಯಾದ್ಯಂತ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ ಕೋರ್ಟ್ ಮಧ್ಯಂತರ ಆದೇಶ ನೀಡಿದರೂ ಅದು ಪಾಲನೆ ಆಗುತ್ತಿಲ್ಲ. ಶಾಂತಿಗೆ ಭಂಗ ತರುವವರ ಮೇಲೆ ಹಾಗೂ 144 ಸೆಕ್ಷನ್ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಆಗಲಿಲ್ಲ. ಈಗ ನಮ್ಮ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಘಟನೆ ಕುರಿತು ಸರ್ಕಾರ ಇನ್ಯಾವಾಗ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಪ್ರಶ್ನಿಸಿದರು. ಇದನ್ನೂ ಓದಿ: ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಆದಾಗಲೇ ಎಸ್‍ಡಿಪಿಐ, ಪಿಎಫ್‍ಐ ಮೇಲೆ ಕ್ರಮ ಕೈಗೊಂಡು ಬ್ಯಾನ್ ಮಾಡಬೇಕಿತ್ತು. ಆಗಲೇ ಕ್ರಮ ಆಗಿದಿದ್ದರೆ ಹರ್ಷ ಸಾವನ್ನಪ್ಪುತ್ತಿರಲಿಲ್ಲ. ಘಟನೆ ಕುರಿತು ಸರ್ಕಾರ ಕಠಿಣ ಕ್ರಮ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೇಪರ್ ಸ್ಟೇಟ್ಮೆಂಟ್ ಕೊಟ್ಟರೆ ಪ್ರಯೋಜನ ಇಲ್ಲ. ಸಿಎಂ ಬೊಮ್ಮಾಯಿ ಮಾತು ನಿಲ್ಲಿಸಿ ಕಠಿಣತೆಯನ್ನು ತೋರಿಸಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ತಮ್ಮ ಪಕ್ಷದ ಕಾರ್ಯಕರ್ತನ ಉಳಿಸಲಾಗದ ಸರ್ಕಾರ, ರಾಜ್ಯದ ಜನತೆಯನ್ನು ರಕ್ಷಿಸಲು ಸಾಧ್ಯವೇ: ಹೆಚ್‌ಡಿಕೆ
ಸಿಎಂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಲಿ ಎಂದು ಆಗ್ರಹಿಸಿದ ಅವರು, ಹೈದರಾಬಾದ್‍ನಲ್ಲಿ ಅತ್ಯಾಚಾರ ಆದಾಗ ಅಪರಾಧಿಗಳನ್ನು ಗುಂಡಿಕ್ಕಿ ಕೊಂದರು. ಅದೇ ರೀತಿ ಇಲ್ಲೂ ಕ್ರಮ ಕೈಗೊಂಡರೆ ಪಾಠ ಕಲಿಯುತ್ತಾರೆ ಎಂದು ಸಲಹೆ ನೀಡಿದರು.