DistrictsKarnatakaLatestShivamogga

ಶಿವಮೊಗ್ಗ: ಬರಗಾಲದ ಬಿಸಿಲಲ್ಲಿ ಕ್ಷೇತ್ರಗಳ ಹುಡುಕಾಟ

ಹಾಲಸ್ವಾಮಿ

ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆ ಬರಗಾಲದಿಂದ ಕಂಗಾಲಾಗಿದೆ. ಬರ ಪರಿಹಾರಕ್ಕಾಗಿ ಬಿಜೆಪಿಯು ರಾಜ್ಯ ಸರ್ಕಾರದ ಜೊತೆಗೂ ಹಾಗೂ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿರುವ ಬಿಜೆಪಿ ಜೊತೆ ಹೋರಾಟ ಮಾಡುತ್ತಿವೆ. ಇವರ ಹೋರಾಟದ ಮುಖ್ಯಗುರಿ 14 ತಿಂಗಳ ನಂತರ ಬರಲಿರುವ ಚುನಾವಣೆಯೇ ಹೊರತು- ಬರ ಪರಿಹಾರ ಅಲ್ಲ. ಇದು ಎರಡೂ ಪಕ್ಷಗಳ ಇತ್ತೀಚಿನ ಪತ್ರಿಕಾಗೋಷ್ಠಿಗಳು, ಹೋರಾಟಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಈ ನಡುವಿನ ಬಿಡುವು, ರಾಜಕಾರಣದ ನಡುವೆಯೇ ಬರದ ಮಾತು ನೆಪ ಮಾತ್ರಕ್ಕೆ ಬರುತ್ತಿದೆ. ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳೂ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸುವ ಸಮೀಕರಣಗಳಿಗೆ ಜೋತು ಬಿದ್ದಿವೆ. ಈ ಸಮೀಕರಣ, ತಂತ್ರಗಾರಿಕೆ ನಡುವೆ ಮೂರು ಪಕ್ಷಗಳ ನಾಯಕರು ಬಿಡುವು ಮಾಡಿಕೊಂಡು ಬರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡುತ್ತಿದ್ದಾರೆ ಎಂದರೆ ಬರದ ಬಗ್ಗೆ ಅವರಿಗೆ ಅರಿವಿದೆ ಅಂದುಕೊಂಡು ಮತದಾರರು ಸಮಾಧಾನ ಮಾಡಿಕೊಳ್ಳಬೇಕಷ್ಟೇ.

ಬಿಎಸ್‍ವೈ ಕ್ಷೇತ್ರ ಬದಲಿಸುತ್ತಾರಾ?
ಇತ್ತೀಚಿನ ದಿನಗಳಲ್ಲಿ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದ ವಿಷಯ ಇದು. ಯಡಿಯೂರಪ್ಪ ಅವರ ತಂತ್ರಗಾರಿಕೆಯ ಒಂದು ಭಾಗವಾಗಿ ಈ ಕ್ಷೇತ್ರ ಬದಲಾವಣೆಯ ವಿಷಯ ಹೊರ ಬಿದ್ದಿದೆ. ಇಂಥ ವಿಷಯ ಹೊರ ಬಿಟ್ಟು ಬರುವ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಗಮನಿಸಿ, ನಿರ್ಧಾರ ಕೈಗೊಳ್ಳುವುದು ಯಡಿಯೂರಪ್ಪ ಅವರ ತಂತ್ರ.

1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗಕ್ಕೆ ಕಾಲಿಟ್ಟ ಬಿ.ಎಸ್.ಯಡಿಯೂರಪ್ಪ ಪುರಸಭೆ ಅಧ್ಯಕ್ಷ, ಶಾಸಕ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದಾರೆ. 2013ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಬಿ.ಎಸ್. ಯಡಿಯೂರಪ್ಪ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಾವು ಸತತವಾಗಿ ಆರು ಅವಧಿಯಿಂದ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದ್ದರು.

ಈಗ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿ.ಎಸ್.ಯಡಿಯೂರಪ್ಪ ಘೋಷಣೆ ಆಗಿದ್ದಾರೆ. ಎಂದಿನಂತೆ ಶಿಕಾರಿಪುರದಲ್ಲೇ ಸ್ಪರ್ಧಿಸಿದರೆ ಮಗ ರಾಘವೇಂದ್ರ ಅವಕಾಶ ವಂಚಿತರಾಗುತ್ತಾರೆ. ಶಿಕಾರಿಪುರ ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಧೈರ್ಯ ಮಾಡುವುದು ಕಷ್ಟ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕ್ಷೇತ್ರ ಬದಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಅಸ್ಥಿತ್ವವೇ ಇಲ್ಲದ ಭದ್ರಾವತಿಯಲ್ಲಿ ಅಥವಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ಪರ್ಧಿಸಬಹುದು ಎಂಬ ಸೂಚನೆ ಕೊಟ್ಟಿದ್ದಾರೆ. ಇವರೆಡೂ ಕ್ಷೇತ್ರದಲ್ಲಿ ಭದ್ರಾವತಿ ಬಿಎಸ್‍ವೈ ಅವರಿಗೆ ಹೆಚ್ಚು ಸಲೀಸು. ವಿಐಎಸ್‍ಎಲ್ ಹಾಗೂ ಎಂಪಿಎಂ ಎರಡೂ ಭದ್ರಾವತಿ ನಗರದ ಎರಡು ಕಣ್ಣುಗಳಿದ್ದಂತೆ. ಎಂಪಿಎಂ ಈಗಾಗಲೇ ಖಾಸಗೀಕರಣದ ಬಾಗಿಲಲ್ಲಿ ನಿಂತಿದೆ. ವಿಐಎಸ್‍ಎಲ್ ಕೂಡ ಇದೇ ಹಾದಿ ಹಿಡಿದಿದೆ. ಇಂಥ ಸಂದರ್ಭದಲ್ಲಿ ಯಡಿಯೂರಪ್ಪ ಈ ಕ್ಷೇತ್ರ ಪ್ರತಿನಿಧಿಸಿದರೆ ಒಳ್ಳೆಯದು ಎಂಬ ಆಲೋಚನೆ ಅಲ್ಲಿನ ಅತೀ ದೊಡ್ಡ ಓಟ್ ಬ್ಯಾಂಕ್ ಆಗಿರುವ ಕಾರ್ಮಿಕರ ಮನದಲ್ಲಿದೆ.

ಯಡಿಯೂರಪ್ಪ ಅವರು, ಕ್ಷೇತ್ರ ಬದಲಿಸುವೆ ಎಂಬ ಒಂದು ಮಾತು ತೇಲಿ ಬಿಟ್ಟಿದ್ದಾರೆ. ಅದು ಸುತ್ತಾ ಸುಳಿದು ಏನೇಲ್ಲಾ ಆಟವಾಡಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

ಸಡ್ಡು ಹೊಡೆದ ಆಯನೂರು:
ರಾಯಣ್ಣ ಬ್ರಿಗೇಡ್ ನಲ್ಲಿ ಇದ್ದೀನಿ? ಇಲ್ಲ? ಎಂದು ಕೆ.ಎಸ್.ಈಶ್ವರಪ್ಪ ಗೊಂದಲಕಾರಿ ಹೇಳಿಕೆಗಳನ್ನು ನೀಡುವ ಭರದಲ್ಲಿ ಒಮ್ಮೆ `ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿ ನನ್ನ ಬಿಟ್ಟು ಮತ್ತೆ ಯಾರಿದ್ದಾರೆ’ ಎಂದು ಪ್ರಶ್ನಿಸಿದ್ದರು. ಯಾರೂ ಇಲ್ಲ ಎನ್ನಬೇಡಿ ನಾನು ಇದಿನಿ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಸಡ್ಡು ಹೊಡೆದು ನಿಂತಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿ ಇನ್ನೂ ಒಂದೂವರೆ ವರ್ಷ ಅವಧಿ ಇರುವಾಗ ಮತ್ತೆ ವಿಧಾನಸಭೆಗೆ ಏಕೆ ಸ್ಪರ್ಧಿಸುತ್ತೀರಿ? ಮಾಜಿ ಸಂಸದ ಹಾಗೂ ಮಾಜಿ ಶಾಸಕನಾಗಿ ನಾನು ನಿರುದ್ಯೋಗಿ ಆಗಿ ಕೂತಿದಿನಿ. ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಿ. ಎರಡೂ ತಟ್ಟೆಯಲ್ಲೂ ನೀವೇ ಊಟ ಮಾಡಬೇಡಿ ಎಂದು ಕಟಕಿಯಾಡಿದ್ದಾರೆ.

ಈ ರೀತಿ ಆಯನೂರು ಮಂಜುನಾಥ್ ಅವರು ಕೆ.ಎಸ್.ಈಶ್ವರಪ್ಪ ಅವರಿಗೆ ಬಹಿರಂಗವಾಗೇ ಸಡ್ಡು ಹೊಡೆದಿರುವುದು ಜಿಲ್ಲಾ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಬೇರೆ ಪಕ್ಷದ ಯಾರೇ ಅಭ್ಯರ್ಥಿಯಾದರೂ ಆಯನೂರು ಪ್ರಬಲ ಸ್ಪರ್ಧೆ ನೀಡಬಲ್ಲ ವ್ಯಕ್ತಿ. ವಿದ್ಯಾರ್ಥಿ ಹೋರಾಟಗಾರನಾಗಿ, ಕಾರ್ಮಿಕ ಮುಖಂಡರಾಗಿ ಜಿಲ್ಲೆಯಲ್ಲಿ ಹಲವು ಹೋರಾಟಗಳನ್ನು ಮಾಡಿದ ಆಯನೂರು ಅವರ ಅಹವಾಲನ್ನು ಬಿಜೆಪಿ ವರಿಷ್ಠರು ಗಣನೆಗೆ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಷ್ಟೇ.

ಈ ನಡುವೆ ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್, ಹೊನ್ನಾಳಿಯಿಂದ ಸ್ಪರ್ಧಿಸುವ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ, ಹೊನ್ನಾಳಿಯ ರೇಣುಕಾಚಾರ್ಯ ಪಕ್ಷದ ವರಿಷ್ಠರು ಹಾಗೂ ಕ್ಷೇತ್ರದ ಜನತೆ ನನ್ನ ಕೈಬಿಡೊಲ್ಲ. ಪರಿಸ್ಥಿತಿ ಹೀಗಿದ್ದಾಗ ಬೇರೆ ಚಿಂತೆ ಯಾಕೆ ನಂಗೆ ಎನ್ನುತ್ತಿದ್ದಾರೆ.

ಕುಮಾರ ಬಂಗಾರಪ್ಪ ಬಿಜೆಪಿಗೆ?
ಮಾಜಿ ಸಿಎಂ ಸಾರೇಕೊಪ್ಪ ಬಂಗಾರಪ್ಪ ಅವರ ಹಿರಿಯ ಮಗ ಕುಮಾರ್ ಬಂಗಾರಪ್ಪ ಎಸ್‍ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದವರು. ಕಳೆದ ಮೂರೂ ಚುನಾವಣೆಗಳಲ್ಲೂ ಸೊರಬದಲ್ಲಿ ಸೋತವರು. ಸೋತು ಸುಣ್ಣವಾಗಿರುವ ಕುಮಾರ್ ರಾಜಕೀಯ ಅಸ್ತಿತ್ವಕ್ಕಾಗಿ ಹಾತೊರೆಯುತ್ತಿದ್ದಾರೆ.

ತಮ್ಮ ರಾಜಕೀಯ ಏಳಿಗೆಗೆ ಕಾಗೋಡು ತಿಮ್ಮಪ್ಪ ಅಡ್ಡಿಯಾಗಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡವರು. ಇತ್ತೀಚೆಗೆ ತಮ್ಮ ಬೆಂಬಲಿಗರ ಸಭೆ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಎಸ್.ಎಂ.ಕೃಷ್ಣ ಅವರ ಜೊತೆ ಗುರುತಿಸಿಕೊಂಡಿರುವ ಕುಮಾರ್ ಶೀಘ್ರವೇ ಬಿಜೆಪಿ ಸೇರುವ ಸಾಧ್ಯತೆ ಇದೆ. ಇವರ ಸೇರ್ಪಡೆಯಿಂದ ಬಿಜೆಪಿಗೆ ರಾಜ್ಯಮಟ್ಟದಲ್ಲಿ ಸ್ಟಾರ್ ಕ್ಯಾಂಪನೈರ್ ಒಬ್ಬರು ಸಿಗಬಹುದೇ ಹೊರತು ಜಿಲ್ಲೆಯಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ನಲ್ಲೇ ಸಲ್ಲದವರು ಬಿಜೆಪಿಯಲ್ಲಿ ಸಲ್ಲುತ್ತಾರೆ ಎಂದು ನಂಬುವುದು ಕಷ್ಟ. ಅದೂ ಅಲ್ಲದೆ, ಈ ಮುಂಚೆಯೇ ಒಮ್ಮೆ ಬಿಜೆಪಿಗೆ ಹೋಗಿ, ಅದು ಉಸಿರುಕಟ್ಟುವ ಪಕ್ಷ ಎಂದು ಜರಿದು ಹಿಂದೆ ಬಂದ ಅನುಭವ ಕುಮಾರ್ ಬಂಗಾರಪ್ಪ ಅವರಿಗೆ ಇದೆ.

ಜೆಡಿಎಸ್ ಒಳ ಹೊಡೆತ: ಮುಂದೆ ಬರಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜಿಲ್ಲಾ ಅಧ್ಯಕ್ಷರನ್ನು ಬದಲು ಮಾಡಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಬಲಗೈ ಭಂಟ ಶ್ರೀಕಾಂತ್ ಅವರ ಬದಲು ನಿರಂಜನ ಅವರನ್ನು ಜಿಲ್ಲಾ ಜೆಡಿಎಸ್‍ಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಬೆವರಿಳಿಸಿದ್ದ ನಿರಂಜನ್ ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿ ಇಟ್ಟಕೊಂಡು ಕೆಲಸ ಮಾಡುತ್ತಿದ್ದಾರೆ. ಬಹಿರಂಗ ಸಭೆಗಳಿಗಿಂತ ವೈಯಕ್ತಿಕ ಸಂಬಂಧಗಳ ಮೂಲಕ ಜನರನ್ನು ತಲುಪುವುದು ಹೆಚ್ಚು ಪರಿಣಾಮಕಾರಿ ಎಂಬ ಸೂತ್ರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಫಲ ತಿಳಿಯಲು ಇನ್ನೂ 14 ತಿಂಗಳು ಕಾಯಬೇಕಷ್ಟೇ.

 

Related Articles

Leave a Reply

Your email address will not be published. Required fields are marked *