– ಸಿದ್ದರಾಮಯ್ಯಗೆ ಕಿಡ್ನಿನೂ ಇಲ್ಲ, ಬ್ರೈನ್ ಕೂಡ ಇಲ್ಲ
ಶಿವಮೊಗ್ಗ: ವಿಧಾನ ಸಭಾಧ್ಯಕ್ಷರಿಗೆ ಏಕವಚನ ಪದ ಪ್ರಯೋಗ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹರಿಹಾಯ್ದಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನ ಸಭಾಧ್ಯಕ್ಷರ ಬಗ್ಗೆ ಅತ್ಯಂತ ಕೀಳು ಮಟ್ಟದ, ಏಕವಚನದಲ್ಲಿ ಮಾತನಾಡುವ ಮೂಲಕ ಅವಮಾನಿಸಿದ್ದು, ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಾರೆ ಎಂದರು.
ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಯಾವ ಸಾಂವಿಧಾನಿಕ ಪೀಠಕ್ಕೆ ಅವಮಾನಿಸಿದ್ದಾರೋ ಅದೇ ಸಂವಿಧಾನದಡಿಯಲ್ಲಿ ಅವರು ವಿಪಕ್ಷದ ನಾಯಕರಾಗಿದ್ದಾರೆ. ಸದಾ ಕಾಲ ಲಂಗು ಲಗಾಮು ಇಲ್ಲದ ನಾಲಿಗೆ ಮೂಲಕ ಸಿದ್ದರಾಮಯ್ಯ ಎಲ್ಲರ ವಿರುದ್ಧ ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯರಿಗೆ ಕಿಡ್ನಿನೂ ಇಲ್ಲ, ಬ್ರೈನ್ ಕೂಡ ಇಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರ ಭಾಷೆ ನೋಡಿದರೆ ಬಹುಶಃ ಅವರ ಅಪ್ಪ ಅಮ್ಮನಿಗೂ ಇದೇ ರೀತಿ ಮಾತನಾಡುತ್ತಾರೋ ಏನೋ. ಸಿದ್ದರಾಮಯ್ಯನವರ ಈ ರೀತಿಯ ವರ್ತನೆ ಅಯೋಗ್ಯತನದ ಪರಮಾವಧಿ, ಈ ಕೂಡಲೇ ಸಿದ್ದರಾಮಯ್ಯ ಸಾರ್ವಜನಿಕವಾಗಿ ಸ್ಪೀಕರ್ ಅವರ ಕ್ಷಮೆಯಾಚನೆ ಮಾಡಬೇಕು ಎಂದು ಎಂ ಎಲ್ ಸಿ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.