ಬೆಂಗಳೂರು: ನಾನು ವಿಧಾನಸೌಧಕ್ಕೆ ಬರೋದೇ ತಪ್ಪೇ ಎಂದು ಶಾಸಕ ಶಿವಲಿಂಗೇಗೌಡ ಅವರು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜೀನಾಮೆ ವಿಚಾರದ ಕುರಿತು ವಿಧಾನಸೌಧದಲ್ಲಿ ಶಾಸಕರನ್ನು ಮಾಧ್ಯಮಗಳು ಪ್ರಶ್ನಿಸಿದವು. ಈ ವೇಳೆ ಕೋಪಗೊಂಡ ಶಾಸಕ ಶಿವಲಿಂಗೇಗೌಡ ಅವರು, ವಿಧಾನಸೌಧಕ್ಕೆ ಯಾರೇ ಬಂದರೂ ರಾಜೀನಾಮೆ ಕೊಡುವುದಕ್ಕೆ ಬರುತ್ತಾರಾ? ಎಲ್ಲರೂ ಸ್ಪೀಕರ್ ಅವರನ್ನು ಭೇಟಿ ಮಾಡುವುದಕ್ಕೆ ಬರುತ್ತಾರಾ? ಪ್ರಜಾಪ್ರಭುತ್ವ ಹಾಳಾಗಿ ಹೋಯಿತು ಎಂದು ಕಿಡಿಕಾರಿದರು.
Advertisement
Advertisement
ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ ಪ್ರಸಂಗ ನಡೆಯಿತು. ಸ್ಪೀಕರ್ ರಮೇಶ್ ಕುಮಾರ್ ಅವರ ಸಂಬಂಧಿಕರೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸ್ಪೀಕರ್ ಮಾಧ್ಯಮಗಳ ವಿರುದ್ಧ ಗರಂ ಆದರು.
Advertisement
ನೀವು ರಾಜೀನಾಮೆ ಅಂಗೀಕರಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಕೋಪದಿಂದ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಯೂ ಆರ್ ನಾಟ್ ಹ್ಯೂಮನ್ ಬೀಯಿಂಗ್? ನಿಮಗೆ ಮಾನವೀಯತೆ ಇಲ್ಲವೇ? ಗೆಟ್ ಔಟ್ ಫ್ರಂ ಹಿಯರ್. ಇಲ್ಲಿಂದ ನಡಿರೀ. ಆಸ್ಪತ್ರೆಯಲ್ಲಿ ಜನರು ಸಾಯುತ್ತಿದ್ದಾರೆ. ನಿಮಗೆ ಬೈಟ್ ಕೊಡಬೇಕಾ ಎಂದು ಕೆಂಡಾಮಂಡಲವಾದ ಪ್ರಸಂಗವೂ ನಡೆಯಿತು.
Advertisement
ಸ್ಪೀಕರ್ ರಮೇಶ್ ಕುಮಾರ್ ಅವರು ಸ್ವಲ್ಪ ಸಮಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಕೋಪಗೊಂಡಿದ್ದ ಪ್ರಸಂಗವನ್ನು ಪ್ರಸ್ತಾಪಿಸಿ ಕ್ಷಮೆ ಕೇಳಿದರು. ಈಗಾಗಲೇ ನನ್ನ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಒಟ್ಟು 11 ಜನ ಶಾಸಕರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸಂಬಂಧಿಕರ ವಿವಾಹ ಇರುವುದರಿಂದ ಮಂಗಳವಾರ ಕಚೇರಿ ಹೋಗಿ ರಾಜೀನಾಮೆ ಪತ್ರ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.