ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ ಸೇರ್ಪಡೆ

Public TV
2 Min Read
shivalingegowda congress3

– ಮೋದಿಯವರೇ.. ಕೊಬ್ಬರಿ ಅಂದ್ರೆ ಏನು ಗೊತ್ತೇನ್ರಿ ನಿಮಗೆ ಎಂದು ಶಿವಲಿಂಗೇಗೌಡ ಗುಡುಗು

ಹಾಸನ: ಜೆಡಿಎಸ್‌ ತೊರೆದಿದ್ದ ಅರಸೀಕೆರೆ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್‌ (Congress) ಸೇರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕಾಂಗ್ರೆಸ್‌ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಮೂರು ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಶಿವಲಿಂಗೇಗೌಡ ಅವರು ಈಚೆಗಷ್ಟೇ ಜೆಡಿಎಸ್‌ ಪಕ್ಷ ತೊರೆದಿದ್ದರು. ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಇದೀಗ ಅರಸೀಕೆರೆ ಪಟ್ಟಣದ ಜೇನುಕಲ್ಲು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ‘ಕೈ’ ತಪ್ಪಿದ ಟಿಕೆಟ್‌: ಸ್ವತಂತ್ರ ಅಭ್ಯರ್ಥಿಯಾಗಿ ವೈಎಸ್‌ವಿ ದತ್ತ ಸ್ಪರ್ಧೆ

shivalingegowda congress1

ಕಾಂಗ್ರೆಸ್‌ ಸೇರಿ ನಂತರ ಮಾತನಾಡಿದ ಶಿವಲಿಂಗೇಗೌಡ, ನನ್ನ ಹಣೆಬರಹದಲ್ಲಿ ಬರೆದಿತ್ತು ಅಂತ ಕಾಣುತ್ತೆ. ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಹೇಗೆ ಕಾಂಗ್ರೆಸ್ ಸೇರಿದರೋ, ಅದೇ ರೀತಿ ನಾನು ಕಾಂಗ್ರೆಸ್ ಸೇರಬೇಕು ಅಂತ ನನ್ನ ಹಣೆಯಲ್ಲೂ ಬರೆದಿತ್ತು. ಅದಕ್ಕೆ ಇವತ್ತು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಬಹಳ ಸಂತೋಷದಿಂದ ಇವತ್ತು ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಲ್ಲಲು ಬಂದಿರುವ ಪುಣ್ಯಾತ್ಮ ಎಲ್ಲರ‌ ಮನೆಗೂ ಒಂದು ಪೇಪರ್ ಪ್ರಿಂಟ್ ಹಾಕಿ ಕಳ್ಸಿದ್ದಾನೆ. ಎಲ್ಲಾ ಬಿಜೆಪಿ ಸರ್ಕಾರದಿಂದ ಆಗಿರುವುದು ಅಂತ. ಅದು ಸುಳ್ಳು, ಬಿಜೆಪಿ ಸರ್ಕಾರದಲ್ಲಿ ಅರಸೀಕೆರೆ ಅಭಿವೃದ್ಧಿ ಆಗಿಲ್ಲ. 538 ಹಳ್ಳಿಗಳಿಗೆ ಕುಡಿಯುವ ನೀರು, ಎತ್ತಿನಹೊಳೆ ಯೋಜನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಿಜೆಪಿಯಿಂದ ಕೆಲವೊಂದು ಆಗಿರಬಹುದು, ಆಗಿಲ್ಲ ಅಂತ ಹೇಳಿಲ್ಲ. ಕಾಂಕ್ರಿಟ್ ರಸ್ತೆಗಾಗಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಹಣ ಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಇದನ್ನೂ ಓದಿ: ನೇಕಾರರ ನಾಡಲ್ಲಿ ಯಾರಿಗೆ ಟಿಕೆಟ್- ಎರಡೂ ಪಕ್ಷದಲ್ಲೂ ಎದ್ದಿದೆ ಅಸಮಾಧಾನದ ಬಿರುಗಾಳಿ

shivalingegowda congress2

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜಕಾರಣಿಗಳ ಮಾನ-ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುತ್ತಿರುವುದು ಬಿಜೆಪಿ ಸರ್ಕಾರ. ಇಂತಹ ನೀತಿಗೆಟ್ಟ, ಮಾನಗೆಟ್ಟ ಆಡಳಿತ ನಾನು ನೋಡಿಲ್ಲ. ನಿಮ್ಮ ಸಾಧನೆ ಏನು ಅಂತ ನಾನು ಹೇಳ್ತೀನಿ. ಇವತ್ತು ಗ್ಯಾಸ್ ಬೆಲೆ 1,200 ಆಗಿದೆ. ನಿಮಗೆ ಮಾನ ಮರ್ಯಾದೆ ಇದಿಯಾ. ದಿನಬಳಕೆ ವಸ್ತಗಳ ಬೆಲೆಗಳೆಲ್ಲಾ ಜಾಸ್ತಿಯಾಗಿವೆ. ಕೊಬ್ಬರಿ ಬೆಲೆ ಇಳಿದಿದೆ. ಫೆಡ್‌ನಲ್ಲಿ ಕೊಬ್ಬರಿ ಖರೀದಿಸಲು ಮುಂದಿನ ವರ್ಷ ಡೇಟ್ ಕೊಟ್ಟಿದ್ದಾರೆ. ಅಲ್ಲಿಯವರೆಗೂ ಕೊಬ್ಬರಿ ಇರ್ತದಾ? ರೀ ಮೋದಿಯವರೆ ಕೊಬ್ಬರಿ ಅಂದ್ರೆ ಏನು ಗೊತ್ತೇನ್ರಿ ನಿಮಗೆ? ಆವರ್ತ ನಿಧಿ ನುಂಗಿ ಹಾಕಿದ್ದೀರಿ. ನಿಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ, ಹತ್ತಿರಕ್ಕೆ ಬರ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನು ನಂಬಿ ಬಂದಿದ್ದೇನೆ. ನನಗೆ 65 ವರ್ಷ ಆಗಿದೆ. ಹಾಲಲ್ಲಿ ಆದರೂ ಹಾಕಿ ನೀರಲ್ಲಾದರೂ ಹಾಕಿ. ಕಾಂಗ್ರೆಸ್ ಸೇರಿರುವುದಕ್ಕೆ ರಾಥೋಡ್ ಒಬ್ಬರು ಇದ್ದಾರೆ ಅವರೇ ಸಾಕ್ಷಿ. ನಾನು ಯಾವ ಹಳ್ಳಿಗಾದ್ರು ಹೋದ್ರೆ, ನೀವು ಸಚಿವರಾಗ್ತೀರಾ ಅಂತ ಕೇಳ್ತಾರೆ. ನೀವು ಅದೇನ್ ಮಾಡ್ತಿರೋ ಮಾಡಿ ಎಂದು ಸಚಿವ ಸ್ಥಾನದ ಆಸೆಯನ್ನು ಹೊರಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಹರಾಜಾಗಿದ್ದು, ಚುನಾವಣೆ ಮಾಡುವಷ್ಟೇ ಹಣ ನೀಡಿದ್ದಾರೆ – ಎಸ್.ಕೆ ಬಸವರಾಜನ್ ಕಿಡಿ

Share This Article