ಶಿವಮೊಗ್ಗ: ನಿಧಿಯಾಸೆಗಾಗಿ ಶಿವಲಿಂಗದ (Shivalinga Monument) ಕೆತ್ತನೆ ಇರುವ ಸ್ಮಾರಕ ಸ್ಥಳವನ್ನು ಧ್ವಂಸಗೊಳಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ನಗರ ಸಮೀಪದ ನೇತ್ರಬೈಲು ಗುಡ್ಡದಲ್ಲಿ ನಡೆದಿದೆ. ನಿಧಿಚೋರರು ನಿಧಿಯಾಸೆಗೆ ಶೋಧ ನಡೆಸಿದ ನಂತರ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ನಿಧಿಯಾಸೆಗಾಗಿ ನಿಧಿಚೋರರು ಐತಿಹಾಸಿಕ ಸ್ಥಳಗಳ ಬಳಿ ಶೋಧ ಕಾರ್ಯ ನಡೆಸುತ್ತಿದ್ದು, ಎಲ್ಲೆಂದರಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಅಗೆದು ಹಾಕುತ್ತಿದ್ದಾರೆ. ಇದೀಗ ಅಂತಹದ್ದೆ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನೇತ್ರಬೈಲುಗುಡ್ಡದಲ್ಲಿ ನಡೆದಿದೆ. ಶ್ರೀಧರಪುರದ ಶಿವಪ್ಪನಾಯಕ ಮತ್ತು ಅರಸರ ಸಮಾಧಿ ಸ್ಥಳದಿಂದ ಒಂದು ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗದ ಕಲ್ಲಿನ ಕೆಳಭಾಗದಲ್ಲಿ ಆರೇಳು ಅಡಿ ಅಗೆಯಲಾಗಿದೆ. ಇದನ್ನೂ ಓದಿ: ಗೋಮಾಂಸ ಮಾರಾಟ ಮಾಡ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ – ವೀಡಿಯೋ ವೈರಲ್
Advertisement
Advertisement
ಅಷ್ಟೇ ಅಲ್ಲದೇ ನಿಧಿಗಾಗಿ ಶೋಧ ಕಾರ್ಯ ನಡೆದಿದ್ದ ಸ್ಥಳದ ಸುತ್ತಲೂ ದಾರ ಕಟ್ಟಿ, ಅರಿಶಿನ, ಕುಂಕುಮ ಹಾಕಿ ನಿಂಬೆಹಣ್ಣು, ಕುಂಬಳಕಾಯಿ, ತೆಂಗಿನಕಾಯಿ, ಒಡೆಯಲಾಗಿದೆ. ಶಿವಲಿಂಗದ ಮೂರ್ತಿಗೆ ಭಸ್ಮ ಬಳಿದಿರುವುದು ಮಾತ್ರವಲ್ಲದೇ ಸುತ್ತಲೂ ಹಾಕಲಾಗಿದೆ. ಹೊರಭಾಗ ಮತ್ತು ಲಿಂಗದ ಸಮೀಪ ಹಣತೆ ಇಟ್ಟು ದೀಪ ಬೆಳಗಿಸಲಾಗಿದೆ. ನಿಧಿ ಶೋಧಕ್ಕೂ ಮೊದಲು ನಿಧಿಚೋರರು ವಾಮಾಚಾರ ನಡೆಸಿರುವ ಬಗ್ಗೆ ಶಂಕಿಸಲಾಗಿದೆ.
Advertisement
ನೇತ್ರಬೈಲು ಗುಡ್ಡ ಜನವಸತಿ ಪ್ರದೇಶದಿಂದ ದೂರದಲ್ಲಿದೆ. ಹೀಗಾಗಿ ಈ ಸ್ಥಳಕ್ಕೆ ಸ್ಥಳೀಯರು ಆಗಾಗ ಹೋಗುವುದು ಕಡಿಮೆ. ಆದರೆ ಸ್ಥಳೀಯರು ತಮ್ಮ ಕೆಲಸಗಳಿಗೆ ಗುಡ್ಡಕ್ಕೆ ಹೋದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ವಾರದ ಹಿಂದೆ ಗ್ರಹಣದ ವೇಳೆ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ಸ್ಥಳೀಯರದ್ದಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ಆತ್ಮಹತ್ಯೆ ಕೇಸ್- ಬಂಧಿತರ ಮೊಬೈಲ್ FSLಗೆ ರವಾನೆ
Advertisement
ಕಳೆದ ಐದಾರು ವರ್ಷದಿಂದ ನಿರಂತರವಾಗಿ ನಿಧಿಯಾಸೆಗೆ ಸ್ಮಾರಕ ಧ್ವಂಸಗೊಳಿಸುತ್ತಿರುವ ಘಟನೆ ನಡೆಯುತ್ತಿದೆ. ಶಿವಪ್ಪನಾಯಕ ಅರಸರ ಸಮಾಧಿ, ಶೂಲದ ಗುಡ್ಡ, ಬರೇಕಲ್ ಬತೇರಿ, ಗಳಿಗೆಬಟ್ಟಲು ಸೇರಿದಂತೆ ವಿವಿಧ ಕಡೆ ಸ್ಮಾರಕ ಹಾಳುಗೆಡವಿದ ಘಟನೆ ಈ ಹಿಂದೆಯೂ ನಡೆದಿತ್ತು. ನಿಧಿಯಾಸೆಗೆ ಬಿದನೂರಿನ ಸ್ಮಾರಕಗಳು ಅವಸಾನಗೊಳ್ಳುತ್ತಿವೆ.
ಘಟನೆ ನಂತರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನಿಧಿಚೋರರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.