ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಭಾನುವಾರ ಸಂಜೆ ನಡೆದ ಶಿವ-ಗಂಗಾ ವಿವಾಹ ಮಹೋತ್ಸವದ ಸಂದರ್ಭದಲ್ಲಿ ಅಚ್ಚರಿಯೊಂದು ನಡೆದಿದೆ.
ಕಡಲತೀರದಲ್ಲಿ ಶಿವ-ಗಂಗಾ ವಿವಾಹ ಮಹೋತ್ಸವ ನೆರವೇರುವ ಸಂದರ್ಭದಲ್ಲಿ ಆಕಾಶದಲ್ಲಿ ಮೋಡವು ಶಿವಲಿಂಗದ ಆಕಾರದಲ್ಲಿ ಗೋಚರಿಸಿದೆ. ಇದನ್ನು ಕಂಡು ಭಕ್ತಾದಿಗಳು ವಿಸ್ಮಯಗೊಂಡಿದ್ದಾರೆ. ಅಚ್ಚರಿಯಿಂದ ಮೋಡದಲ್ಲಿ ಮೂಡಿದ್ದ ಶಿವಲಿಂಗಕ್ಕೆ ನಮಿಸಿದ್ದಾರೆ.
ಸೂರ್ಯಾಸ್ತದ ಬಳಿಕ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗದ ರೂಪ ಮೂಡಿತ್ತು. ಇದನ್ನು ಕಂಡ ಸ್ಥಳದಲ್ಲಿ ನೆರೆದಿದ್ದ ಭಕ್ತರು ಅಚ್ಚರಿಪಟ್ಟರು. ಅಲ್ಲದೆ ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡಿದ್ದರೆ, ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ.
ಈ ವಿಸ್ಮಯ ದೃಶ್ಯವನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಮೋಡದಲ್ಲಿ ಮೂಡಿದ್ದ ಶಿವಲಿಂಗ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.