ಬೆಂಗಳೂರು: ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ದಂಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ ಹಾಗೂ ಸೀಮಾ ಖಾನ್ ಬಂಧಿತ ದಂಪತಿ. ಸಂತ್ರಸ್ತ ಮಹಿಳೆ ಪತಿ ಅನಾರೋಗ್ಯ ಪೀಡಿತರಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು ಎಂದು ನೊಂದ ಮಹಿಳೆ ದೂರಿದ್ದಾರೆ.
ಏನಿದು ಪ್ರಕರಣ?:
ಸಂತ್ರಸ್ತ ಮಹಿಳೆಯ ಪತಿ ಅನಾರೋಗ್ಯ ಪೀಡಿತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಇಮ್ರಾನ್ ಸಹಾಯ ಮಾಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದು ಪರಿಚಯ ಮಾಡಿಕೊಂಡಿದ್ದನು. ನಂತರ ದಿನ ಕಳೆದಂತೆ ಸಂತ್ರಸ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆಯ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದನು. ಇದಾದ ಬಳಿಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದ ಸೀಮಾ ಖಾನ್ ಎಂಬವರ ಜೊತೆ ಆರೋಪಿ ಇಮ್ರಾನ್ ವಿವಾಹವಾಗಿದ್ದನು.
ಮದುವೆ ಬಳಿಕ ಹೆಂಡತಿ ಸೀಮಾಗೆ ತನ್ನ ಅಕ್ರಮ ಸಂಬಂಧದ ವಿಷಯವನ್ನು ತಿಳಿಸಿದ್ದಾನೆ. ಈ ಬಗ್ಗೆ ತಿಳಿದ ಆರೋಪಿ ಪತ್ನಿ ಗಂಡನಿಗೆ ಬುದ್ಧಿ ಹೇಳುವ ಬದಲು ಇಬ್ಬರು ಸೇರಿ ಸಂತ್ರಸ್ತ ಮಹಿಳೆಗೆ ಅಕ್ರಮ ಸಂಬಂಧದ ವಿಡಿಯೋ ಇದೆ ಎಂದು ಬೆದರಿಕೆ ಒಡ್ಡಿ, ಮಹಿಳೆಯಿಂದ ಬರೋಬ್ಬರಿ 8 ಲಕ್ಷ ರೂ. ಪೀಕಿದ್ದಾರೆ.
ಅಷ್ಟೇ ಅಲ್ಲದೇ ಆರೋಪಿಗಳು ಮತ್ತೆ ಮತ್ತೆ ಹಣಕ್ಕಾಗಿ ಸಂತಸ್ತ ಮಹಿಳೆಗೆ ಕಿರುಕುಳ ನೀಡುತ್ತಿದ್ದರು. ಕೊನೆಗೆ ಇದರಿಂದ ಮನನೊಂದು ಮಹಿಳೆ ಶಿವಾಜಿನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಶಿವಾಜಿನಗರ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv