ಬಾಗಲಕೋಟೆ: ಸುಮಾರು ನಾಲ್ಕು ದಿನಗಳಿಂದ ಬಾಗಲಕೋಟೆ (Bagalkot) ನಗರದಲ್ಲಿ ಶಿವಾಜಿ ಮೂರ್ತಿ (Shivaji Statue) ಗಲಾಟೆ ಜೋರಾಗಿದೆ. ಆ.13 ರಂದು ಬೆಳ್ಳಂಬೆಳಿಗ್ಗೆ ಬಾಗಲಕೋಟೆ ನಗರದ ಹೊರವಲಯದ ಕಾಂಚನಾ ಪಾರ್ಕ್ ಬಳಿ ಜಾಗದಲ್ಲಿ ಸುಮಾರು 18 ಅಡಿ ಎತ್ತರದ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಜಿಲ್ಲೆಯ ಜನರಿಗೆ ಅಚ್ಚರಿ ಹಾಗೂ ಕುತೂಹಲ ಹೆಚ್ಚಾಗಿತ್ತು. ಶಿವಾಜಿ ಮೂರ್ತಿಯನ್ನು ರಾತ್ರೋ ರಾತ್ರಿ ಹಿಂದೂ ಅಭಿಮಾನಿಗಳು ಕೂರಿಸಿ ಹೋಗಿದ್ದಾರೆಂದು ನುಣುಚಿಕೊಂಡ ಬಿಜೆಪಿ (BJP) ಮುಖಂಡರ ಒಂದು ಗುಂಪು ಶಿವಾಜಿಮೂರ್ತಿ ಪ್ರತಿಷ್ಠಾಪಿಸಿದ್ದು ಸ್ವಾಗತಾರ್ಹ ಎಂದು ಸಮರ್ಥನೆ ಮಾಡಿಕೊಂಡಿತ್ತು.
Advertisement
Advertisement
ಬಿಜೆಪಿಯ ಇನ್ನೊಂದು ಗುಂಪಿಗೆ ಈ ವಿಚಾರದಿಂದ ಬೇಸರವೂ ಆಗಿತ್ತು. ಮೂರ್ತಿ ಪ್ರತಿಷ್ಠಾಪನೆ ಖುಷಿಯ ವಿಚಾರ ಆದರೆ ರಾತ್ರೋ ರಾತ್ರೋ ಕಳ್ಳತನದಿಂದ ಶಿವಾಜಿಮೂರ್ತಿಯನ್ನು ಪ್ರತಿಷ್ಠಾಪಿಸುವ ಅವಶ್ಯಕತೆ ಏನಿತ್ತು? ಹಿಂದೂ ಹೃದಯ ಸಾಮ್ರಾಟ ಎಂದು ಕರೆಯಲ್ಪಡುವ ಶಿವಾಜಿ ಪ್ರತಿಮೆಯನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ತಂದು ಕೂರಿಸಬಹುದಿತ್ತು ಎಂದು ಬೇಸರವನ್ನೂ ಹೊರಹಾಕಿತ್ತು.
Advertisement
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರ ಇಷ್ಟಕ್ಕೆ ನಿಲ್ಲಲಿಲ್ಲ. ಶಿವಾಜಿ ಪ್ರತಿಮೆ ಇರಿಸಿದ ಜಾಗ ಸದ್ಯ ಬಾಗಲಕೋಟೆ ನಗರಸಭೆಯ ಆಧೀನದಲ್ಲಿದೆ. ಯಾವುದೇ ಅನುಮತಿ ಇಲ್ಲದೇ ಆ ಜಾಗದಲ್ಲಿ ಮೂರ್ತಿ ಕೂರಿಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಅಲ್ಲದೇ ಪ್ರತಿಷ್ಠಾಪಿಸಿದ ಮೂರ್ತಿಯನ್ನು ನಗರಸಭೆ ಸಿಬ್ಬಂದಿ ತೆರವು ಗೊಳಿಸುತ್ತಾರೆಂಬ ಸುದ್ದಿ ಜೋರಾಗಿ ಹರಿದಾಡತೊಡಗಿತ್ತು. ಇದರಿಂದ ಕೆರಳಿದ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು (Hindu Activists) ಆಗಸ್ಟ್ 14 ರಂದು ಬೆಳಗ್ಗೆ ನಗರಸಭೆಗೆ ತೆರಳಿ ಪ್ರತಿಭಟನೆ ಮಾಡಿದರು. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್
Advertisement
ಆಯುಕ್ತರ ಜೊತೆ ವಾಗ್ವಾದ ಮಾಡಿ ಯಾವುದೇ ಕಾರಣಕ್ಕೂ ಮೂರ್ತಿಯನ್ನು ತೆರವುಗೊಳಿಸಬೇಡಿ ಎಂಬ ಎಚ್ಚರಿಕೆ ನೀಡಿದರು. ಆದರೆ ಬಾಗಲಕೋಟೆ ಜಿಲ್ಲಾಧಿಕಾರಿ ಎಂ ಜಾನಕಿ ಶಿವಾಜಿ ಮೂರ್ತಿ ತೆರವಿಗೆ ಆದೇಶ ನೀಡಿದ್ದಲ್ಲದೇ, ನಗರದಲ್ಲಿ ಸೆಕ್ಷನ್ 144 ಕಲಂ ಜಾರಿಮಾಡಿ ನಿಷೇಧಾಜ್ಞೆ ಜಾರಿ ಮಾಡಿದರು. ಆದೇಶದ ಅನ್ವಯ ಸಂಜೆ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ ಪೊಲೀಸ್ ಸಿಬ್ಬಂದಿ ಮೂರ್ತಿ ಇರುವ ಕಾಂಚನಾ ಪಾರ್ಕ್ ರಸ್ತೆಯನ್ನು ಬಂದ್ ಮಾಡಿ ಸರಿಯಾಗಿ ರಾತ್ರಿ 10 ಗಂಟೆಗೆ ನಗರಸಭಾ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಮೂರ್ತಿಯನ್ನ ತೆರವು ಗೊಳಿಸಿದರು.
ಮೂರ್ತಿ ತೆರವು ಕಾರ್ಯಾಚರಣೆ ವಿರೋಧಿಸಿ ಸ್ಥಳದಲ್ಲಿ ಪ್ರತಿಭಟನೆ ನಡಸಿದ್ದ 15 ಬಿಜೆಪಿ ಮುಖಂಡರನ್ನು ಹಾಗೂ ಕೆಲ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಇದರಿಂದ ಕೆರಳಿರುವ ಬಿಜೆಪಿಗರು ಗುರುವಾರ ಬಾಗಲಕೋಟೆಯ ಶಿವಾನಂದ್ ಜಿನ್ ನಲ್ಲಿ ಸಭೆ ಸೇರಿ, ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಒಮ್ಮತದಿಂದ ಶುಕ್ರವಾರ ಬಾಗಲಕೋಟೆ ನಗರವನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ತೆರವುಗೊಳಿಸಿದ ಮೂರ್ತಿಯನ್ನು ಅದೇ ಜಾಗೆಯಲ್ಲಿ ಮರು ಪ್ರತಿಷ್ಠಾಪಿಸಬೇಕು. ಇಲ್ಲದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಮೂರ್ತಿ ಮರು ಪ್ರತಿಷ್ಠಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮನವಿಯನ್ನೂ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ನೇತೃತ್ವದಲ್ಲಿ ಬಾಗಲಕೋಟೆ ಶಿವಾನಂದ್ ಜಿನ್‌ನಲ್ಲಿ ಸಭೆ ಸೇರಲಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ಹೋರಾಟದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ.
ಸದ್ಯ ನಾಲ್ಕು ದಿನಗಳಿಂದ ಶಿವಾಜಿ ಮೂರ್ತಿ ವಿಚಾರವಾಗಿ ಬಾಗಲಕೋಟೆಯಲ್ಲಿ ಬಿಗುವಿನ ವಾತವರಣ ನಿರ್ಮಾವಾಗಿದೆ. ಬಿಜೆಪಿಗರ ನಡೆ ಗಮನಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
Web Stories