Connect with us

Latest

ಸರ್ಕಾರ ರಚನೆಗೆ ಅಮಿತ್ ಶಾ ಆಶೀರ್ವಾದ ಬೇಕಿಲ್ಲ- ಉದ್ಧವ್ ಠಾಕ್ರೆ

Published

on

ಮುಂಬೈ: ಒಂದಲ್ಲ ಒಂದು ದಿನ ಶಿವಸೇನೆಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ತಂದೆ ಬಾಳಾ ಸಾಹೇಬ್ ಠಾಕ್ರೆಯವರಿಗೆ ಮಾತು ಕೊಟ್ಟಿದ್ದೇವೆ. ಇದನ್ನು ಮಾಡಿಯೇ ತೀರುತ್ತೇವೆ ಎಂದು ಉದ್ಧವ್ ಠಾಕ್ರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ತಿರುಗೇಟು ನೀಡಿದ್ದಾರೆ.

ಫಡ್ನವೀಸ್ ಮಧ್ಯಮಗಳ ಜೊತೆ ಮಾತನಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ಶಿವಸೇನೆಯವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಾವು ಈ ಹಿಂದೆ ನಮ್ಮ ತಂದೆ ಬಾಳಾ ಠಾಕ್ರೆಗೆ ಮಾತು ಕೊಟ್ಟಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಪಟ್ಟದ ಕುರಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಇದನ್ನು ಮಾಡಿಯೇ ತೀರುತ್ತೇವೆ. ನಮಗೆ ಅಮಿತ್ ಶಾ ಅವರ ಆಶೀರ್ವಾದ ಬೇಕಿಲ್ಲ ಎಂದು ಕಿಡಿಕಾರಿದರು.

ನಾನು ಆಯ್ಕೆಗಳ ಬಗ್ಗೆ ಮಾತನಾಡುವಾಗ ಆಘಾತಕ್ಕೊಳಗಾಗಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ. ಆದರೆ ಸರ್ಕಾರ ರಚಿಸಿಯೇ ತೀರುತ್ತೇವೆ ಎಂಬ ಮಾಜಿ ಸಿಎಂ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಅವರು ಹೇಗೆ ಸರ್ಕಾರ ರಚನೆ ಮಾಡುತ್ತಾರೆ. ಕರ್ನಾಟಕ ಹಾಗೂ ಮಣಿಪುರದಲ್ಲಿ ಮಾಡಿದಂತೆ ಮಾಡುತ್ತಾರೆಯೇ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರವಾಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಮಹಾರಾಷ್ಟ್ರದ ಜನತೆ ಶಿವಸೇನೆ ಬಗ್ಗೆ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಹೊಂದಿದ್ದಾರೆ. ಅಮಿತ್ ಶಾ ಆ್ಯಂಡ್ ಕಂಪನಿ ವಿರುದ್ಧವಾಗಿದ್ದಾರೆ. ಮಹಾರಾಷ್ಟ್ರದ ಹೆಚ್ಚಿನ ಜನರು ಶಿವಸೇನೆ ಮತ್ತು ಬಾಳಾ ಸಾಹೇಬ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಮಿತ್ ಶಾ ಆ್ಯಂಡ್ ಕಂಪನಿ ಮೇಲೆ ನಂಬಿಕೆ ಇಲ್ಲ ಎಂದು ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದರು.

ಇದೇ ವೇಳೆ ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದಿರುವ ಉದ್ಧವ್ ಠಾಕ್ರೆ ನಾನು  ಆರ್‌ಎಸ್‌ಎಸ್ ನ್ನು ಗೌರವಿಸುತ್ತೇನೆ. ಆದರೆ ಆರ್‍ಎಸ್‍ಎಸ್ ಈ ಕುರಿತು ಮರುಚಿಂತನೆ ನಡೆಸಬೇಕು. ಸುಳ್ಳು ಹೇಳುವುದು ಯಾವ ರೀತಿಯ ಹಿಂದುತ್ವ, ರಾಮನನ್ನು ಅನುಸರಿಸುವವರು ರಾಮನ ತತ್ವಾದರ್ಶಗಳನ್ನೇಕೆ ಆಚರಿಸುತ್ತಿಲ್ಲ. ಭಗವಾನ್ ರಾಮನನ್ನು ಸ್ತುತಿಸಲು ಬಳಸುವ ಅದೇ ಬಾಯಿಂದ ಅವರು ಸುಳ್ಳು ಹೇಳಿರುವುದು ನನಗೆ ಆಘಾತವನ್ನುಂಟು ಮಾಡಿದೆ. ಈ ವಿಚಾರದಲ್ಲಿ ಆರ್‌ಎಸ್‌ಎಸ್ ನಾವು ಹಿಂದೂ ಪಕ್ಷವೇ ಅಥವಾ ಇಲ್ಲವೇ ಎಂಬುದನ್ನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಅಲ್ಲದೆ 50:50 ಫಾರ್ಮುಲಾ ಬಗ್ಗೆ ನೀವು ಸುಳ್ಳು ಹೇಳಿದ್ದೀರಿ ಎಂದು ಒಪ್ಪಿಕೊಳ್ಳುವ ವರೆಗೂ ನಾವು ನಿಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಅವರಿಗೆ ಸವಾಲು ಹಾಕಿದರು.

Click to comment

Leave a Reply

Your email address will not be published. Required fields are marked *