ಮುಂಬೈ: ಮಹಾರಾಷ್ಟ್ರದಲ್ಲಿ ಯಾರು ಸರ್ಕಾರ ರಚನೆಗೆ ಮುಂದಾಗದೇ ಇದ್ದಲ್ಲಿ ನಾವು ಸರ್ಕಾರ ರಚನೆಗೆ ಮುಂದಾಗುತ್ತೇವೆ ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖಂಡ, ರಾಜ್ಯ ಸಭೆ ಸದಸ್ಯ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದು, ಯಾರು ಸರ್ಕಾರ ರಚನೆಗೆ ಕೈ ಹಾಕದೇ ಇದ್ದರೆ ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Advertisement
ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಲ್ಲೇ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
Advertisement
Advertisement
ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ 15 ದಿನ ಕಳೆದರೂ ಇನ್ನೂ ಯಾವುದೇ ಪಕ್ಷ ಸರ್ಕಾರ ರಚಿಸುವ ಕುರಿತು ಹಕ್ಕು ಮಂಡಿಸದೇ ಇದ್ದ ಕಾರಣ ಬಿಜೆಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಹಕ್ಕು ಮಂಡಿಸಿ ಸರ್ಕಾರ ರಚಿಸಲು ಅವಕಾಶ ನೀಡಿದ್ದು ಸೋಮವಾರದೊಳಗೆ ಬಹುಮತ ಸಾಬೀತಿಗೆ ಸೂಚಿಸಲಾಗಿದೆ.
Advertisement
ಈಗ ಶಿವಸೇನೆ ಸರ್ಕಾರ ರಚನೆಯ ಹೇಳಿಕೆ ನೀಡಿದ್ದು ಸ್ಫೋಟಕ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಯಾವುದೇ ಷರತ್ತು ವಿಧಿಸದೇ ಶಿವಸೇನೆಯನ್ನು ಬೆಂಬಲಿಸಲು ಮುಂದಾಗಿದೆ. ಈ ಸಂಬಂಧ ಎನ್‍ಸಿಪಿ ಜೊತೆ ಸೇರಿ ಬಾಹ್ಯ ಬೆಂಬಲ ನೀಡಲು ಮಾತುಕತೆ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇದುವರೆಗೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿರುವುದು ಬಿಜೆಪಿ ಪಾಲಿಗೆ ಮುಳುವಾಗಿದೆ.
ಶಿವಸೇನೆ ಪಟ್ಟು ಸಡಿಲಸದ ಪರಿಣಾಮ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ತನ್ನ 34 ಶಾಸಕರನ್ನು ರಾಜಸ್ಥಾನದಲ್ಲಿಟ್ಟಿದೆ.
ಶುಕ್ರವಾರ ವಿಧಾನಸಭೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ರಾಜ್ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇಷ್ಟು ದಿನ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಪ್ರಜೆಗಳಿಗೆ ಧನ್ಯವಾದ ಹೇಳಿದರು. ಜೊತೆಗೆ 5 ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ನಾವು ಮಹಾರಾಷ್ಟ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಈ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. 50 -50 ಸೂತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮೈತ್ರಿ ಮಾಡಿಕೊಂಡಿದ್ದರೂ ಚುನಾವಣಾ ಫಲಿತಾಂಶ ಬಂದ ದಿನವೇ ಶಿವಸೇನೆ ಎಲ್ಲ ಅವಕಾಶಗಳ ಬಾಗಿಲು ತೆರೆಯುತ್ತೇವೆ ಎಂದು ಹೇಳಿದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿ ಟೀಕಿಸಿದ್ದರು.