Connect with us

ಎನ್‍ಡಿಎ ಒಕ್ಕೂಟದಿಂದ ಹೊರಬಂದ ಶಿವಸೇನೆ

ಎನ್‍ಡಿಎ ಒಕ್ಕೂಟದಿಂದ ಹೊರಬಂದ ಶಿವಸೇನೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಸೇನೆ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದ್ದು, 2019ರ ಲೋಕಸಭಾ ಮತ್ತು ಮುಂದಿನ ವಿಧಾನಸಭಾ ಚುನಾವಣೆ ವೇಳೆ ಮೈತ್ರಿ ಮಾಡದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದೆ.

ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಎನ್‍ಡಿಎ ಒಕ್ಕೂಟದಿಂದ ಹೊರ ಬರುವ ಪ್ರಸ್ತಾವನೆಯನ್ನು ಮಂಡಿಸಿದರು. ಈ ಪ್ರಸ್ತಾಪವನ್ನು ಅವಿರೋಧವಾಗಿ ಅಂಗೀಕರಿಸಲಾಯಿತು.

ಇದೇ ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದರು. ಶಿವಸೇನೆ ಪಕ್ಷವು ಎನ್‍ಡಿಎ ಒಕ್ಕೂಟದ ಅತ್ಯಂತ ಹಳೆಯ ಪಕ್ಷವಾಗಿದ್ದು, 1990ರ ದಶಕದಲ್ಲಿ ಎರಡು ಪಕ್ಷಗಳು ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಪಡೆದಿದ್ದವು.

2014 ರ ಲೋಕಾಸಭಾ ಚುನಾವಣೆಯ ವೇಳೆಯಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲು ಶಿವಸೇನೆ ಪಕ್ಷವು ಮಹತ್ವದ ಪಾತ್ರವಹಿಸಿತ್ತು. ಆದರೆ ಇತ್ತೀಚೆಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಆಗಾಗ ವೈಮನಸ್ಸು ಕಾಣಿಸಿಕೊಂಡಿತ್ತು. ತದನಂತರ ಉಂಟಾದ ಬೆಳವಣಿಗೆಗಳಲ್ಲಿ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಬಿಜೆಪಿ ಯ ಹಲವು ನೀತಿಗಳನ್ನು ನೇರವಾಗಿ ಟೀಕಿಸಿ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಇದನ್ನೂ ಓದಿ: ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತ್ತು. ಅದರೂ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮುಂದುವರೆಸಿದ್ದು ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಈ ವೇಳೆಯೇ ಶಿವಸೇನೆ ಎನ್‍ಡಿಎ ಒಕ್ಕೂಟದಿಂದ ಹೊರಬರುವ ಸೂಚನೆಯನ್ನು ನೀಡಿತ್ತು.  ಇದನ್ನೂ ಓದಿ: 2019ರಲ್ಲಿ ಬಿಜೆಪಿ ಸೋಲಿಸಲು ಲಾಲೂ ಪ್ರಸಾದ್ ಯಾದವ್ ಐಡಿಯಾ

2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಒಟ್ಟು 288 ಸ್ಥಾನಗಳ ಪೈಕಿ ಬಿಜೆಪಿ 122ರಲ್ಲಿ ಜಯಗಳಿಸಿದ್ದರೆ, ಶಿವಸೇನೆ 63ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 42, ಎನ್‍ಸಿಪಿ, 41, ಇತರೇ 20 ಸ್ಥಾನಗಳಲ್ಲಿ ಜಯಗಳಿಸಿತ್ತು. ಇದನ್ನೂ ಓದಿ: ಮೋದಿ ಅಲೆ ಮರೆಯಾಗಿದ್ದು, ದೇಶವನ್ನು ಮುನ್ನಡೆಸಲು ರಾಹುಲ್ ಸಮರ್ಥ: ಶಿವಸೇನೆ ಸಂಸದ

ಪ್ರಸ್ತುತ ಈಗ ಇರುವ ಸಮ್ಮಿಶ್ರ ಸರ್ಕಾರ 2019ರ ವರೆಗೆ ಮುಂದುವರೆಯಲಿದ್ದು, ಲೋಕಸಭಾ ಚುನಾವಣೆಯ ನಂತರ ಸರ್ಕಾರಕ್ಕೆ ನೀಡಿರುವ ಬೆಂಬಲದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

2014ರ ಲೋಕಸಭಾ ಚುನಾವಣೆಯ ವೇಳೆ ಮಹಾರಾಷ್ಟ್ರದ ಒಟ್ಟು 48 ಕ್ಷೇತ್ರಗಳಲ್ಲಿ ಬಿಜೆಪಿ 23, ಶಿವಸೇನೆ 18, ಎನ್‍ಸಿಪಿ 4, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. 42 ಲೋಕಸಭಾ ಕ್ಷೇತ್ರಗಳು ಎನ್‍ಡಿಎ ಪಾಲಾಗಿದ್ದರೆ, 6 ಸ್ಥಾನಗಳು ಯುಪಿಎ ಪಾಲಾಗಿತ್ತು.

Advertisement
Advertisement