ಕಾರವಾರ: ಅಂಕೋಲದ ಶಿರೂರಿನಲ್ಲಿ ಭೂಕುಸಿತವಾಗಿ (Shiruru Landslide) ಒಂದು ತಿಂಗಳು ಕಳೆದಿದೆ. ಆದರೆ ಸಂತ್ರಸ್ತರಿಗೆ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿಯೇ ಉಳಿದಿದೆ. ಇದರಿಂದ ಸಂತ್ರಸ್ತ ಕುಟುಂಬಗಳು ಸಂಕಷ್ಟದಲ್ಲೇ ದಿನ ಕಳೆಯುವಂತಾಗಿದೆ.
ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಜಗನ್ನಾಥ ಕುಟುಂಬದ ಇಬ್ಬರು ಮಕ್ಕಳಿಗೆ ತಹಶೀಲ್ದಾರ್ ಕಚೇರಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವುದಾಗಿ ಖುದ್ದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಭರವಸೆ ನೀಡಿದ್ದರು. ಇದೀಗ ಕೆಲಸ ಕೇಳಿ ಹೋದ ಜಗನ್ನಾಥ್ ಮಕ್ಕಳಿಗೆ, ಕೆಲಸ ಸದ್ಯ ಕಾಲಿ ಇಲ್ಲ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಕೊಟ್ಟ ಭರವಸೆಯೂ ಹುಸಿಯಾಗಿದೆ. ಇತ್ತ ಮನೆ ಕಳೆದುಕೊಂಡವರ ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಈ ದುರಂತದಲ್ಲಿ 11 ಜನ ಮೃತಪಟ್ಟಿದ್ದರು. ಇನ್ನೂ ಈ ದುರಂತದಿಂದ ಉಳುವೆರೆ ಗ್ರಾಮದಲ್ಲಿ ಆರು ಮನೆಗಳು ಸಂಪೂರ್ಣ ನಾಶವಾಗಿದ್ದವು.