ಉಡುಪಿ: ನಗರದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಮೂಲ ಶಿರೂರು ಮಠದಲ್ಲಿ ಮಧ್ವ ಸಂಪ್ರದಾಯದಂತೆ ಲಕ್ಷ್ಮಿವರ ಸ್ವಾಮೀಜಿಗಳ ಅಂತ್ಯಕ್ರಿಯೆ ನಡೆದಿದೆ.
ಶಿರೂರು ಮೂಲ ಮಠದ ಒಳಾಂಗಣದಲ್ಲಿ ಬೃಂದಾವನ ರಚನೆ ಮಾಡಿ, ಶ್ರೀಗಳು ಬಳಸುತ್ತಿದ್ದ ಕರ್ಪೂರ, ಕಾಳು ಮೆಣಸು, ಉಪ್ಪು, ಪೂಜಾ ಪರಿಕರಗಳು ಮತ್ತು ಹತ್ತಿ ಇವುಗಳನ್ನೆಲ್ಲಾ ಬೃಂದಾವನದಲ್ಲಿ ಇರಿಸಿ, ಕುಳಿತ ಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತು. ಹೆರ್ಗ ವೇದವ್ಯಾಸ ಭಟ್ಟರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ರು.
Advertisement
Advertisement
ಎರಡು ದಿನಗಳ ಹಿಂದೆ ಅಸ್ವಸ್ಥರಾಗಿದ್ದ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇವತ್ತು ಬೆಳಗ್ಗೆ ನಿಧನರಾಗಿದ್ದರು. ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಶ್ರೀಗಳನ್ನು ಕೃಷ್ಣಮಠಕ್ಕೆ ತರಲಾಗಿತ್ತು. ಅಲ್ಲಿ ಶಿರೂರು-ಸೋದೆ ದ್ವಂದ್ವ ಮಠದಿಂದ ಸಿದ್ಧಪಡಿಸಲಾದ ಬಿದಿರಿನ ಬುಟ್ಟಿಯಲ್ಲಿರಿಸಿ ತುಳಸಿ ಮಾಲೆಯನ್ನು ಹಾಕಲಾಯ್ತು. ಕನಕನ ಕಿಂಡಿ ಮೂಲಕ ಶ್ರೀಗಳ ದೇಹಕ್ಕೆ ಕೃಷ್ಣನ ದರ್ಶನ ಮಾಡಿಸಲಾಯ್ತು.
Advertisement
ಅಲ್ಲಿಂದ ಶೀರೂರು ಮಠಕ್ಕೆ ತೆಗೆದುಕೊಂಡು ಹೋಗಲಾಯ್ತು. ಮಾಧ್ವ ಸಂಪ್ರದಾಯದಂತೆ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ಮಾಡಲಾಯಿತು. ವಿಠಲ ದೇವರ ಆರಾಧಕರಾಗಿದ್ದ ಶ್ರೀಗಳು, ಕೊನೆ ಕ್ಷಣದಲ್ಲೂ ವಿಠಲನ ನಾಮಜಪಿಸಿ ಪ್ರಾಣ ಬಿಟ್ಟರು ಅಂತ ತಿಳಿದು ಬಂದಿದೆ.
Advertisement
ಶ್ರೀಗಳು ವಿಧಿವಶರಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿ ಸ್ತಬ್ಧವಾಗಿತ್ತು. ಶಾಲಾ, ಕಾಲೇಜು, ಅಂಗಡಿ ಮುಂಗಟ್ಟು ಬಂದ್ ಮಾಡಿ ಶೋಕ ಆಚರಿಸಲಾಯ್ತು. ಈ ಮಧ್ಯೆ, ಆಷಾಢ ಮುಗಿಯೋವರೆಗೆ ಉತ್ತರಾಧಿಕಾರಿ ನೇಮಕ ಇಲ್ಲ ಅಂತ ಕೃಷ್ಣಮಠ ಸ್ಪಷ್ಟಪಡಿಸಿದೆ.