ಮೆರವಣಿಗೆ ಬರುತ್ತಿದ್ದಂತೆ ಮುಚ್ಚಿದ ಶಿರೂರು ಮಠದ ಬಾಗಿಲು- ಮಠದ ಜಗಲಿಯಲ್ಲೇ ಪುಷ್ಪನಮನ ಸಲ್ಲಿಕೆ

Public TV
2 Min Read
Udp mutt 1

ಉಡುಪಿ: ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಸ್ವಾಮೀಜಿಯವರ ಆಪ್ತ ಅಭಿಮಾನಿಗಳು ಉಡುಪಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದರು. ರಾಜ್ಯದಲ್ಲಿ ಬಾಲ ಸನ್ಯಾಸ ಸ್ವೀಕಾರ ನಡೆದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ಸಭೆಯಲ್ಲಿ ಕೇಳಿ ಬಂತು. ಈ ನಡುವೆ ಶಿರೂರು ಮಠದಲ್ಲಿ ಸ್ವಾಮೀಜಿಗಳ ಪುಷ್ಪನಮನಕ್ಕೆ ಅವಕಾಶವೇ ಸಿಗಲಿಲ್ಲ.

ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಂಶಯಾಸ್ಪದವಾಗಿ ಸಾವನ್ನಪ್ಪಿ ತಿಂಗಳು ಕಳೆದಿದೆ. ಶ್ರೀಗಳ ಸಾವಿಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮರಣೋತ್ತರ ಪರೀಕ್ಷೆಯ ಫೈನಲ್ ಎಫ್ ಎಸ್ ಎಲ್ ರಿಪೋರ್ಟ್ ಇನ್ನೂ ಬಂದಿಲ್ಲ. ಈ ನಡುವೆ ಶಿರೂರು ಶ್ರೀ ಅಭಿಮಾನಿ ಸಮಿತಿ ಸ್ವಾಮೀಜಿಗಳ ಅತೀ ಆಪ್ತರನ್ನು ಸೇರಿಸಿ ಶ್ರದ್ಧಾಂಜಲಿ ಸಭೆ ನಡೆಸಿತು.

ಶಿರೂರು ಸ್ವಾಮೀಜಿ ಭಾವಚಿತ್ರವನ್ನು ಅಷ್ಟಮಠಗಳಿರುವ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯ್ತು. ಶಿರೂರು ಮಠದ ಒಳಗೆ ಸ್ವಾಮೀಜಿಯವ ಭಾವಚಿತ್ರ ಕೊಂಡೊಯ್ದು ಪುಷ್ಪ ನಮನ ಸಲ್ಲಿಸಲು ಅಭಿಮಾನಿಗಳು ಇಚ್ಛಿಸಿದ್ದರು. ಆದ್ರೆ ದ್ವಂದ್ವ ಸೋದೆ ಮಠ ಮತ್ತು ಶಿರೂರು ಮಠದ ಮೇಲ್ವಿಚಾರಣಾ ಸಮಿತಿ ಮಠದೊಳಗೆ ಭಕ್ತರು ಪ್ರವೇಶಿಸಿ ಪುಷ್ಪನಮನ ಸಲ್ಲಿಸಲು ಅವಕಾಶ ನೀಡಲಿಲ್ಲ. ಕೃಷ್ಣಮಠದ ಪಾರ್ಕಿಂಗ್ ಏರಿಯಾದ ಮಥುರಾ ಛತ್ರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಯಾವುದೇ ಮಠಗಳಲ್ಲಿ ಬಾಲ ಸನ್ಯಾಸ ಸ್ವೀಕಾರ ಮಾಡಬಾರದೆಂಬ ಒತ್ತಾಯ ಕೇಳಿ ಬಂತು. ಬಾಲ ಸನ್ಯಾಸ ಸ್ವೀಕಾರ ಮಾಡಿದ್ರೆ ಬಾಲಕಾರ್ಮಿಕ ಪದ್ಧತಿ ಕಾನೂನಿನ ಅನ್ವಯ ಕೇಸು ದಾಖಲಿಸಿ, ಕಾನೂನು ಹೋರಾಟ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಯ್ತು.

Udp mutt 2

ಕೇಮಾರು ಸಾಂದೀಪನಿ ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿ, ಶಿರೂರು ಸ್ವಾಮೀಜಿ ಮೂರು ಪರ್ಯಾಯ ಮಾಡಿದವರು. 48 ವರ್ಷ ಕೃಷ್ಣನ ಪೂಜೆಯನ್ನು ಮಾಡಿದ್ದವರು. ಶಿರೂರು ಮಠದ ಬಾಗಿಲು ಭಕ್ತ ಜನರಿಗೆ ಸದಾ ತೆರೆದಿತ್ತು. ಇಂದು ಸ್ವಾಮೀಜಿಯ ಭಾವಚಿತ್ರ ಪ್ರವೇಶಕ್ಕೆ ಮಠದ ಬಾಗಿಲು ಮುಚ್ಚಿದೆ. ಮಠದ ಒಳಗೆ ಪುಷ್ಪನಮನಕ್ಕೆ ನಮಗೆ ಅವಕಾಶ ಸಿಗಲಿಲ್ಲ. ಇದು ಸಾಧು ಪರಂಪರೆಗೆ ಮಾಡಿದ ಅವಮಾನ. ಉದಾರತೆಯಿಂದ ಶಿರೂರು ಮಠದ ಬಾಗಿಲು ತೆಗೆಯಬೇಕಿತ್ತು ಅಂತ ನೊಂದು ಹೇಳಿದರು.

ಶಿರೂರು ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿ ತಿಂಗಳು ಕಳೆದ್ರೂ ಇನ್ನೂ ಪೊಲೀಸರ ಕೈಸೇರಿಲ್ಲ. ದೇಶದ ಗಮನ ಸೆಳೆದ ಪ್ರಕರಣ ಆದರೂ ವರದಿ ಇನ್ನೂ ಬಂದಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಎಫ್‍ಎಸ್‍ಎಲ್ ವರದಿ ತಡವಾದಷ್ಟು ವಿಷ ವಿಷತ್ವವನ್ನು ಕಳೆದುಕೊಳ್ಳುತ್ತದೆ. ಪ್ರಕರಣದ ದಿಕ್ಕೇ ಬದಲಾಗುವ ಸಾಧ್ಯತೆಯಿದೆ ಎಂದು ಕ್ರಿಮಿನಲ್ ವಕೀಲ, ಶಿರೂರು ಶ್ರೀ ಆಪ್ತ ರವಿಕಿರಣ್ ಮುರ್ಡೇಶ್ವರ ಸಂಶಯ ವ್ಯಕ್ತಪಡಿಸಿದರು.

ಈ ನಡುವೆ ಶಿರೂರು ಸ್ವಾಮೀಜಿ ವೃಂದಾವನಸ್ಥರಾದ ನಂತರ ಮಾಡಬೇಕಾದ ಸಂಸ್ಕಾರ, ಆರಾಧನೆ ಪ್ರಕ್ರಿಯೆಗಳು ನಡೆದಿಲ್ಲ. ಈ ಬಗ್ಗೆ ಕೂಡಾ ಮಠದ ಭಕ್ತರು ಅಸಾಮಾಧಾನ ವ್ಯಕ್ತಗೊಳಿಸಿದ್ದಾರೆ. ಆರಾಧನೆ ಮಾಡಲು ಪೊಲೀಸರು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *