ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ರಕ್ತವಾಂತಿ ಮಾಡಿಕೊಂಡು ಸಾವು ಕಂಡಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸ್ವಾಮೀಜಿಗಳನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಮ್ಮ ವೈದ್ಯರ ತಂಡವೆಲ್ಲರೂ ಸೇರಿ ಚಿಕಿತ್ಸೆ ಕೊಟ್ಟಿದ್ದೆವು. ಆದರೆ ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು. ನಮ್ಮ ಸಂಶಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಮುಂದಿನ ಕ್ರಮ ಪೊಲೀಸರು ಕೈಗೊಳ್ಳುತ್ತಾರೆ. ಕೆಎಂಸಿ. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಅವಿನಾಶ್ ಹೇಳಿದ್ದಾರೆ.
Advertisement
ಫುಡ್ ಪಾಯಿಸನಿಂಗ್ ಎಂದು ಹೇಳಲಾಗುತ್ತಿದೆಯಾದರೂ ಹಲವಾರು ಅನುಮಾನಗಳು ಎದ್ದಿವೆ. ಇನ್ನೊಂದೆಡೆ ಬುಧವಾರ ಸಂಜೆಯೇ ರಕ್ತ ವಾಂತಿ ಕಾರಿರುವ ಶ್ರೀಗಳು ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಅನ್ನೋ ಸಂದೇಶ ಹರಿದಾಡಿತ್ತು. ಆದರೆ ಆಸ್ಪತ್ರೆ ವೈದ್ಯಾಧಿಕಾರಿ ಈ ಸುದ್ದಿಯನ್ನು ಅಲ್ಲಗಳೆದಿದ್ದು, ಆರೋಗ್ಯ ಸುಧಾರಣೆ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು.
Advertisement
ಇತ್ತೀಚೆಗೆ ತಮ್ಮ ಪಟ್ಟದ ದೇವರನ್ನು ನೀಡದಿರುವುದನ್ನು ಪ್ರಶ್ನಿಸಿ ಇತರೇ ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಅಲ್ಲದೇ ಉಳಿದ ಮಠಾಧೀಶರು ತನ್ನ ಮೇಲೆ ಉತ್ತರಾಧಿಕಾರಿ ಹೊಂದುವಂತೆ ಹಾಕುತ್ತಿರುವ ಒತ್ತಡದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ತೆರಳಿ ತಡೆಯಾಜ್ಞೆ ತಂದಿದ್ದರು. ಶಿರೂರು ಮಠದ `ಶ್ರೀ ಅನ್ನವಿಠಲ’ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಸ್ಬಾಮೀಜಿ, ಪರ್ಯಾಯ ಮಠಾಧೀಶರಿಗೆ ಕೇಳಿಕೊಂಡಿದ್ದರೂ ನೀಡದ ಪರ್ಯಾಯ ಪೀಠಾಧಿಪತಿಗಳು ಉತ್ತರಾಧಿಕಾರಿ ಹೊಂದುವಂತೆ ಸೂಚಿಸಿದ್ದರು. ಕೃಷ್ಣಮಠದಲ್ಲಿ ಈ ಬಗ್ಗೆ ಗುಪ್ತ ಸಭೆ ನಡೆದು ಶಿರೂರು ಸ್ವಾಮೀಜಿಗಳನ್ನು ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರವೂ ನಡೆದಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಅವರು ಏಕಾಏಕಿ ಅನಾರೋಗ್ಯ ಪೀಡಿತರಾಗಿದ್ದಲ್ಲದೆ, ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಭಕ್ತರ ಅನುಮಾನಕ್ಕೆ ಕಾರಣವಾಗಿದೆ.
Advertisement
ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿರೂರು ಶ್ರೀಗಳು ಉಡುಪಿಯಲ್ಲಿ ಜನಸಾಮಾನ್ಯರ ಸ್ವಾಮೀಜಿ ಎಂದೇ ಹೆಸರು ಗಳಿಸಿದ್ದರು. ಸಂಗೀತ, ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶಿರೂರು ಶ್ರೀಗಳು ತನ್ನ ಎರಡು ಅವಧಿಯ ಪರ್ಯಾಯದಲ್ಲಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅವ್ಯವಹಾರ ತಡೆಯುವಲ್ಲೂ ಯಶಸ್ವಿಯಾಗಿದ್ದರು. ಶಿರೂರು ಸ್ವಾಮೀಜಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶ್ರೀಗಳು ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
Advertisement
55ನೇ ವಯಸ್ಸಿನ ಶಿರೂರು ಶ್ರೀಗಳ ವಿಧಿವಶದಿಂದ ಶಿರೂರು ಮಠ ಅನಾಥವಾಗಿದ್ದು, ಹಲವು ಗಣ್ಯರು, ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ. ಕೇವಲ ಫುಡ್ ಪಾಯ್ಸನಿಂಗ್ ಆಗಿರುತ್ತಿದ್ದರೆ ಹಠಾತ್ ಸಾವು ಸಂಭವಿಸುತ್ತಿರಲಿಲ್ಲ. ಆಹಾರದ ರೂಪದಲ್ಲಿ ಬೇರೇನೋ ಸೇವನೆ ಆಗಿರುವ ಶಂಕೆ ಭಕ್ತರಲ್ಲಿದೆ.