ಹಾಸನ: ಇದೇ ತಿಂಗಳ 20 ರಿಂದ ಮಂಗಳೂರು-ಬೆಂಗಳೂರು ಮಾರ್ಗದ ಶಿರಾಡಿ ಘಾಟ್ ಬಂದ್ ಆಗಲಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ ಶಿರಾಡಿ ಘಾಟ್ ರಸ್ತೆ ಬಂದ್ ಮಾಡಲಾಗುತ್ತಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಸಕಲೇಶಪುರ ಪ್ಲಾಂಟರ್ಸ್ ಕ್ಲಬ್ ನಲ್ಲಿ ಶಿರಾಡಿ ಘಾಟ್ ರಸ್ತೆಯ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡುವ ಮತ್ತು ಸಾಧಕ ಭಾದಕಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಸಚಿವರು, ಅಧಿಕವಾದ ಮಳೆಯಿಂದ ನಿರಂತರವಾಗಿ ಹಾಳಾಗುತ್ತಿದ್ದ ಶಿರಾಡಿ ಘಾಟ್ ರಸ್ತೆ ಭಾಗವನ್ನು ಕಾಂಕ್ರೀಟೀಕರಣ ಕಾಮಗಾರಿಯ ಮೂಲಕ ಸರಿಪಡಿಸಿ ಈ ಭಾಗದ ರಸ್ತೆ ಬಳಕೆದಾರರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
Advertisement
Advertisement
ಈಗಾಗಲೇ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 13 ಕಿಲೋಮೀಟರ್ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು ಮೇ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಶಿರಾಡಿ ಘಾಟ್ ರಸ್ತೆ ಕಾಮಗಾರಿ ಹಿನ್ನೆಲೆ, ವಾಹನಗಳು ಸಂಚರಿಸುವ ಮಾರ್ಗ ಬದಲಾವಣೆ ಮಾಡಲಾಗಿದೆ. 6 ಪರ್ಯಾಯ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ವಾಹನಗಳನ್ನು ಎ ಮತ್ತು ಬಿ ಪಟ್ಟಿಗೆ ಸೇರುವ ವಾಹನಗಳೆಂದು ವಿಭಜನೆ ಮಾಡಿ ಎ ಪಟ್ಟಿಗೆ ಸೇರುವ ಸಾಮಾನ್ಯ ಬಸ್ಸುಗಳು, ಕಾರ್, ಜೀಪ್ ಎರಡು ಚಕ್ರದ ವಾಹನಗಳು ಇವುಗಳನ್ನು ಮಂಗಳೂರು-ಬಿಸಿ ರೋಡ್-ಉಜಿರೆ-ಚಾರ್ಮಾಡಿ ಘಾಟ್-ಮೂಡಿಗೆರೆ- ಬೇಲೂರು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
Advertisement
Advertisement
ಬಿ ಪಟ್ಟಿಗೆ ಸೇರಿಸಿರುವ ಭಾರಿ ವಾಹನಗಳನ್ನು, ಉಡುಪಿ-ಕುಂದಾಪುರ-ಮುರುಡೇಶ್ವರ-ಹೊನ್ನಾವರ-ಸಾಗರ-ಶಿವಮೊಗ್ಗ-ನೆಲಮಂಗಲ-ಬೆಂಗಳೂರು ಈ ಮಾರ್ಗವಾಗಿ ಸಂಚರಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.