ಶಿವಮೊಗ್ಗ: ಮೂರು ಸಾವಿರದ ಎಂಟು ನೂರು ರೂಪಾಯಿ ಕೊಡಿ ನಿಮಗೆ ಬಿಪಿಎಲ್ ಕಾರ್ಡ್ ಮಾಡಿ ಕೊಡುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಆಫರ್ ಕೊಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ ಸಾರ್ವಜನಿಕರಿಗೆ ಬಿಪಿಎಲ್ ಕಾರ್ಡ್ ಸಿಗುವುದು ತಡವಾಗುತ್ತಿದೆ ಎಂಬ ದೂರು ಇದೆ. ಇದೇ ಅವಕಾಶವನ್ನು ಬಳಸಿಕೊಂಡು ಶಿವಮೊಗ್ಗದ ಎಲ್.ಎಲ್.ಆರ್ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯೊಂದು 3,800 ರೂಪಾಯಿಗೆ ಬಿಪಿಎಲ್ ಕಾರ್ಡ್ ಹಾಗೂ 2,800 ರೂಪಾಯಿಗೆ ಎಪಿಎಲ್ ಕಾರ್ಡ್ ಕೊಡುತ್ತಿದೆ.
Advertisement
Advertisement
ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಬಗ್ಗೆ ಪರಿಶೀಲನೆಗೆ ಹೋಗಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ರಮ್ಯಾ ಅವರಿಗೆ ಶಾಕ್ ಕಾದಿತ್ತು. ನೀವೂ 3,800 ರೂಪಾಯಿ ಕೊಡಿ, ನಿಮಗೂ ಬಿಪಿಎಲ್ ಕಾರ್ಡ್ ಮಾಡಿ ಕೊಡುತ್ತೇವೆ ಎಂದಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ, ದುಡ್ಡು ಪಡೆದು, ಕಾರ್ಡ್ ಮಾಡಿ ಕೊಡುತ್ತಿವಿ, ನೀವು ಯಾರು ಕೇಳೋಕೆ ಎಂದು ಈ ಅಧಿಕಾರಿಗೆ ಅವಾಜ್ ಹಾಕಿದ್ದಾರೆ.
Advertisement
Advertisement
ಈ ಮಳಿಗೆಗೆಯಲ್ಲಿ ರೇಷನ್ ಕಾರ್ಡ್ ಜೊತೆ ಜಾತಿ- ಆದಾಯ ಪ್ರಮಾಣ ಪತ್ರವೂ ಸಿಗುತ್ತದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದೂವರೆಗೂ ಈ ಸಂಸ್ಥೆಯವರು ಎಷ್ಟು ಕಾರ್ಡ್ ನೀಡಿದ್ದಾರೆ. ನೀಡಿರುವ ಕಾರ್ಡ್ ಗಳು ಅಸಲಿಯೋ? ನಕಲಿಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇಲಾಖೆಯಲ್ಲಿ ಬಿಪಿಎಲ್ ಕಾರ್ಡ್ ಕೊಡುವಾಗ ನೀತಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಈ ಕಾರಣದಿಂದ ಕಾರ್ಡ್ ನೀಡುವುದು ವಿಳಂಬ ಆಗುತ್ತಿದೆ. ಇದೇ ಅವಕಾಶವನ್ನು ಖಾಸಗಿಯವರು ಬಳಸಿಕೊಂಡು ದುಡ್ಡು ಮಾಡುತ್ತಿದ್ದಾರೆ.