ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) 17 ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸದ್ದಿಲ್ಲದೇ ಶಿಲ್ಪಾ ಶೂಟಿಂಗ್ ಗೆ ಬಂದು ಹೋಗಿದ್ದಾರೆ. ಅವರ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.
ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ (KD) ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಕೊಡದೇ ಇದ್ದರೂ, ಶಿಲ್ಪಾ ವಾಪಸ್ಸು ಸ್ಯಾಂಡಲ್ ವುಡ್ ಗೆ ಬರುವ ವಿಚಾರವಂತೂ ನಿಜವಾಗಿತ್ತು. ಈಗದು ಪಕ್ಕಾ ಆಗಿದೆ. ಆಗಲೇ ಶಿಲ್ಪಾ ಶೆಟ್ಟಿ ತಮ್ಮ ಭಾಗದ, ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅವರು ಯಾವ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ
ಜೋಗಿ ಪ್ರೇಮ್ (Prem) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಾಲಿವುಡ್ ಮತ್ತೋರ್ವ ಹೆಸರಾಂತ ನಟ ಸಂಜಯ್ ದತ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ನಲ್ಲಿ ಸಂಜಯ್ ಭಾಗಿಯಾಗಿದ್ದರು. ಆ ವಿಡಿಯೋವನ್ನು ಸ್ವತಃ ಚಿತ್ರತಂಡದವರೇ ಲೀಕ್ ಮಾಡಿದ್ದರು. ಆದರೆ, ಶಿಲ್ಪಾ ಕುರಿತಾದ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಈಗಾಗಲೇ ಕೆಡಿ ಸಿನಿಮಾದ ಮೂರು ಹಂತದ ಚಿತ್ರೀಕರಣವನ್ನು ಪ್ರೇಮ್ ಮುಗಿಸಿದ್ದಾರೆ. ಇದೊಂದು ಭಾರಿ ಬಜೆಟ್ ಸಿನಿಮಾವಾಗಿದ್ದರಿಂದ ಒಂದಷ್ಟು ಸೆಟ್ ಗಳನ್ನು ಹಾಕಲಾಗುತ್ತಿದೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಂಜಯ್ ದತ್ ನಂತರ ಶಿಲ್ಪಾ ಶೆಟ್ಟಿ ಹೆಸರು ಹೊರ ಬಿದ್ದಿತ್ತು. ಮತ್ತಷ್ಟು ಅಚ್ಚರಿಯ ಹೆಸರುಗಳು ಕೇಳಿ ಬರುತ್ತಿವೆ.