ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty) ಅವರು ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠಕ್ಕೆ (Rambhapuri Mutt) ರೋಬೋಟಿಕ್ ಆನೆಯನ್ನ (Robotic Elephant) ಕೊಡುಗೆಯಾಗಿ ನೀಡಿದ್ದಾರೆ.
ಜೀವಂತ ಆನೆಯನ್ನೂ ನಾಚಿಸುವಂತೆ ರೋಬೋಟಿಕ್ ಆನೆ ಇದೆ. ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ. ಈ ರೋಬೋಟಿಕ್ ಆನೆ ಸದಾ ಮಠದ ಆವರಣದಲ್ಲೇ ಇದ್ದು, ಭಕ್ತರನ್ನ ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ.
ಸದಾ ಕಣ್ಣು ಬಿಟ್ಟು, ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನು ಅಲುಗಾಡಿಸುತ್ತಿರುತ್ತದೆ. ಇದರಿಂದಾಗಿ ಆನೆಯನ್ನು ನೋಡಿದರೆ ನಿಜವಾದ ಆನೆ ಕೂಡ ಒಂದು ಕ್ಷಣ ವಿಚಲಿತಗೊಳ್ಳವಂತೆ ಇದೆ.
ರೋಬೋಟಿಕ್ ಆನೆಯನ್ನು ತಂದಿದ್ದ ಸಿಬ್ಬಂದಿ, ಶಿಲ್ಪಾ ಶೆಟ್ಟಿಯವರು ಮಠಕ್ಕೆ ನಿಜವಾದ ಆನೆಯನ್ನೇ ಕೊಡುಗೆಯಾಗಿ ಕೊಡುವವರಿದ್ದರು. ಆದರೆ, ಕಾನೂನಿನ ತೊಡಕಾಗಬಹುದು ಎಂದು ಕಾಡಿನ ಆನೆಯನ್ನು ಹೋಲುವ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ರಂಭಾಪುರಿ ಶ್ರೀಗಳು ಈ ರೋಬೋಟಿಕ್ ಆನೆಯನ್ನ ಉದ್ಘಾಟಿಸಿದ ಕೂಡಲೇ ಮಠಕ್ಕೆ ಬಂದಿದ್ದ ನೂರಾರು ಭಕ್ತರು ಆನೆಯ ಆಶೀರ್ವಾದ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪಂಚಪೀಠಗಳಲ್ಲಿ ಬಾಳೆಹೊನ್ನೂರಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠ ಮೊದಲನೇಯದ್ದಾಗಿದೆ.