ನವದೆಹಲಿ: ಮೌಂಟ್ ಎವರೆಸ್ಟ್‌ಗೆ (Mount Everest) ಟ್ರೆಕ್ಕಿಂಗ್‌ಗೆಂದು ಹೋದವರ ಜೀವವನ್ನು ಅಪಾಯಕ್ಕೆ ಒಡ್ಡಿ, ವಿಮಾ ಕಂಪನಿಗಳಿಂದ ಕೋಟಿ ಕೋಟಿ ಕಕ್ಕಿಸುತ್ತಿದ್ದ ನೇಪಾಳದ (Nepal) ದೊಡ್ಡ ವಂಚಕರ ಜಾಲವೊಂದು ಇದೀಗ ಬಯಲಾಗಿದೆ.
ಚಾರಣಿಗರ ಊಟದಲ್ಲಿ ವಿಷವಿಕ್ಕಿ, ಅವರನ್ನು ಅಸ್ವಸ್ಥರಾಗುವಂತೆ ಮಾಡಿ, ವಿಮೆ ಹಣವನ್ನು ಟ್ರೆಕ್ಕಿಂಗ್ (Trekking) ಆಯೋಜಿಸುತ್ತಿದ್ದ ಶೆರ್ಪಾ ಕಂಪನಿ ದೋಚುತ್ತಿತ್ತು. ಈ ಸಂಬಂಧ ಟ್ರೆಕ್ಕಿಂಗ್ ಕಂಪ, ಹೆಲಿಕಾಪ್ಟರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 32 ಜನರ ವಿರುದ್ಧ ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ವಾರ್ ಎಫೆಕ್ಟ್‌ನಿಂದ EVಗೆ ಹೆಚ್ಚಿದ ಡಿಮ್ಯಾಂಡ್ – ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ ವಾಹನಗಳು ಸೇಲ್
ವಂಚನೆ ನಡೆದಿದ್ದು ಹೇಗೆ?
ಚಾರಣಿಗರಿಗೆ ನೆರವು ನೀಡಬೇಕೆಂದು ಉದ್ದೇಶದಿಂದ ಶೆರ್ಪಾಗಳು(ಮಾರ್ಗದರ್ಶಕ) ಅವರೊಂದಿಗೆ ಹೋಗುತ್ತಿದ್ದರು. ಈ ವೇಳೆ ಅವರ ಊಟದಲ್ಲಿ ಕಿಂಗ್ ಸೋಡಾ ಬೆರೆಸುತ್ತಿದ್ದರು. ಇದನ್ನು ತಿನ್ನುತ್ತಿದ್ದಂತೆ ಜನರ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಶೆರ್ಪಾಗಳು, ಎತ್ತರದಿಂದಾಗಿ ಉಂಟಾದ ಅಸ್ವಸ್ಥತೆ ಎಂಬಂತೆ ಬಿಂಬಿಸಿ, ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಮೊದಲೇ ಗಾಬರಿಗೊಂಡಿರುವ ಚಾರಣಿಗರು ಇದಕ್ಕೊಪ್ಪದೆ ಬೇರೆ ದಾರಿ ಇರುತ್ತಿರಲಿಲ್ಲ.
ಪರ್ವತದ ತಪ್ಪಲಿನಿಂದ ಹೀಗೆ ರಕ್ಷಿಸಲ್ಪಟ್ಟವರನ್ನು ನಿಗದಿತ ಆಸ್ಪತ್ರೆಗಳಿಗೆ ದಾಖಲಿಸಿ ಅನಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ಟ್ರೆಕ್ಕಿಂಗ್ ಆಯೋಜಕ ಸಂಸ್ಥೆ ನಕಲಿ ಕಡತ ತಯಾರಿಸುತ್ತಿತ್ತು. ಇದನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ವಿಮಾ ಕಂಪನಿಗಳಿಂದ ವಿಮೆಯ ಬೃಹತ್ ಮೊತ್ತವನ್ನು ದೋಚುತ್ತಿದ್ದರು. ಈ ಹಣವು ಶೆರ್ಪಾ, ಟ್ರಕ್ ಆಯೋಜಕರು, ಹೆಲಿಕಾಪ್ಟರ್ ನಿರ್ವಹಿಸುವವರು ಮತ್ತು ಆಸ್ಪತ್ರೆಯ ನಡುವೆ ಹಂಚಿಕೆಯಾಗುತ್ತಿತ್ತು.ಇದನ್ನೂ ಓದಿ: ಕರ್ನಾಟಕದಲ್ಲಿ ಆಟೋ ಗ್ಯಾಸ್ ಪೂರೈಕೆಯನ್ನು ಹೆಚ್ಚಿಸಿದ್ದೇವೆ: ಇಂಡಿಯನ್ ಆಯಿಲ್
ವಂಚನೆ ಬಯಲಾಗಿದ್ದು ಹೇಗೆ?
3 ಪರ್ವತ ರಕ್ಷಣಾ ಸಂಸ್ಥೆಗಳ 6 ಕಾರ್ಯನಿರ್ವಾಹಕರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಈ ವಂಚನೆಯ ಜಾಲವು ಬಯಲಾಗಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಮಾರ್ಗದಲ್ಲಿ ಸುಮಾರು 186 ಕೋಟಿ ರೂ. ದೋಚಲಾಗಿದೆ. ಒಂದು ರಕ್ಷಣಾ ಕಂಪನಿಯು ಮಾಡಿದ 1,248 ರಕ್ಷಣೆಗಳಲ್ಲಿ 171 ಪ್ರಕರಣಗಳು ನಕಲಿಯಾಗಿದ್ದು, ಇದರಿಂದಲೇ 93 ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿದ್ದು, ಪ್ರತಿಯೊಬ್ಬ ವಂಚಕನ ಮೇಲೆ 105 ಕೋಟಿ ರೂ. ದಂಡ ವಿಧಿಸುವಂತೆ ಸರ್ಕಾರಿ ವಕೀಲರು ಆಗ್ರಹಿಸಿದ್ದಾರೆ.
ಪರಿಣಾಮವೇನು?
ಅನೇಕ ನೇಪಾಳಿಗರ ಪಾಲಿಗೆ ಚಾರಣವೇ ಜೀವನಾಧಾರವಾದರೂ ಇಂತಹ ಘಟನೆಗಳಿಂದ ಚಾರಣಿಗರ ವಿಶ್ವಾಸ ಕುಸಿಯುತ್ತಿದೆ. ಜೊತೆಗೆ ಕೆಲ ಅಂತಾರಾಷ್ಟ್ರೀಯ ವಿಮಾ ಕಂಪನಿಗಳು ವಿಮೆ ಕೊಡುವುದನ್ನೇ ನಿಲ್ಲಿಸಿವೆ. 2018ರಲ್ಲಿ ನೇಪಾಳ ಸರ್ಕಾರವು ಚಾರಣಿಗರ ಹೊಣೆಯನ್ನು ಟ್ರೆಕ್ಕಿಂಗ್ ಆಯೋಜಕರಿಗೇ ವಹಿಸಿತ್ತು.ಇದನ್ನೂ ಓದಿ: ಸುದೀಪ್ ಸಾವಿಗೆ ನಾನು ಕಾರಣಳಲ್ಲ.. ನನ್ನ ಮೇಲಿನ ಆರೋಪ ಸುಳ್ಳು: ಉದ್ಯಮಿಯ ಪತ್ನಿ ಸೌಮ್ಯ ಶೆಟ್ಟಿ ರಿಯಾಕ್ಷನ್

