ನವದೆಹಲಿ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ಯುಕೆ (United Kingdom) ರಾಜಾಶ್ರಯ ನೀಡಲು ಒಪ್ಪುವರೆಗೂ ಅವರಿಗೆ ಭಾರತ (India) ಮಧ್ಯಂತರ ರಾಜಾಶ್ರಯ ನೀಡಲಿದೆ.
ಸೋಮವಾರ ಸಂಜೆ ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಗೆ ಹಸೀನಾ ಬಂದಿಳಿದಿದ್ದಾರೆ. ಹಿಂಡನ್ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರು ಶೇಖ್ ಹಸೀನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ
- Advertisement -
- Advertisement -
ಸದ್ಯ ಬಾಂಗ್ಲಾದೇಶ ಏರ್‌ಫೋರ್ಸ್ ಸಿ-130 ಮಿಲಿಟರಿ ಟ್ರಾನ್ಸ್‌ಪೋರ್ಟ್ ವಿಮಾನ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ಯಾವಾಗ ಶೇಖ್ ಹಸೀನಾ ಯುಕೆಗೆ ತೆರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಇಂದು ಮಧ್ಯಾಹ್ನದ ನಂತರ ಯುಕೆಗೆ ಹೋಗಲಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೆ ಇನ್ನೂ ರಾಜಾಶ್ರಯ ನೀಡುವ ಬಗ್ಗೆ ಯುಕೆ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಯುಕೆ ಅನುಮತಿ ನೀಡುವವರೆಗೂ ಹಸೀನಾ ಭಾರತದಲ್ಲೇ ಇರಲಿದ್ದಾರೆ.
- Advertisement -
- Advertisement -
ಯುಕೆಗೆ ರಾಜಾಶ್ರಯ ಹೇಗೆ?
ಬಾಂಗ್ಲಾದೇಶ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಇಬ್ಬರು ಹಸೀನಾ ಮತ್ತು ರೆಹನಾ ಇಬ್ಬರು ಪುತ್ರಿಯರು. ರೆಹನಾ ಅವರ ಪುತ್ರಿ ಟುಲಿಪ್ ಸಿದ್ದಿಕಿ ಲೇಬರ್ ಪಕ್ಷದ ನಾಯಕಿ ಮತ್ತು ಸಂಸತ್ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಹಸೀನಾ ಬ್ರಿಟನ್‌ಗೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎನ್ನುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಕೂಡ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು ಕಾಂಗ್ರೆಸ್ ತಿಳಿಸಿದೆ.
ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ 56% ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸೇನೆ, ವಿಪಕ್ಷಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆಕ್ರೋಶ ಕಟ್ಟೆಯೊಡೆದಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.