ಢಾಕಾ: ಮಾನವ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ಬಾಂಗ್ಲಾದೇಶದ (Bangladesh) ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT-BD) ಗಲ್ಲು ಶಿಕ್ಷಿ ವಿಧಿಸಿದೆ.
ತ್ರಿಸದಸ್ಯ ನ್ಯಾಯಪೀಠವು ಶೇಖ್ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಹೇಳಿ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಶೇಖ್ ಹಸೀನಾ ಮಾನವ ಹಕ್ಕುಗಳ ಅಪರಾಧ ಎಸಗಿದ್ದಾರೆ. 2024ರ ಆಗಸ್ಟ್ 5 ರಂದು ಚಂಖರ್‌ಪುಲ್‌ನಲ್ಲಿ ಆರು ಪ್ರತಿಭಟನಾಕಾರರನ್ನು ಮಾರಕ ಆಯುಧಗಳನ್ನು ಬಳಸಿ ಕೊಲ್ಲಲಾಯಿತು. ಈ ಆದೇಶಗಳನ್ನು ಹೊರಡಿಸುವ ಮೂಲಕ ಶೇಖ್ ಹಸೀನಾ ಮೂಲಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ್ದಾರೆ. ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಹಸೀನಾ ಅವರ ಆಪ್ತರಾಗಿದ್ದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನೂ ಪ್ರಕರಣದಲ್ಲಿ ಕೋರ್ಟ್ ದೋಷಿ ಎಂದು ಹೇಳಿದೆ.
ಹಸೀನಾ ವಿರುದ್ಧದ ಪ್ರಕರಣಗಳನ್ನು ಪಿತೂರಿ ಎಂದು ಅವಾಮಿ ಲೀಗ್ ಪಕ್ಷ ಕರೆದಿದೆ. ಹಸೀನಾ ಮತ್ತು ಖಾನ್ ವಿಚಾರಣೆಗೆ ಹಾಜರಾಗದ ಕಾರಣ 54 ಸಾಕ್ಷ್ಯಗಳನ್ನು ಪರಿಶೀಲಿಸಿ, ಆರೋಪಿಗಳ ಅನುಪಸ್ಥಿತಿಯಲ್ಲೇ ಅಕ್ಟೋಬರ್ 23ರಂದು ವಿಚಾರಣೆ ಪೂರ್ಣಗೊಳಿಸಲಾಗಿತ್ತು. ಆರೋಪಿಗಳಿಗೆ ಮರಣ ದಂಡನೆಯನ್ನೇ ವಿಧಿಸಬೇಕು ಎಂದು ನ್ಯಾಯ ಮಂಡಳಿಯ ವಕೀಲರು ವಾದ ಮಂಡಿಸಿದ್ದರು.
ಸರ್ಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿಯಂತ್ರಿಸಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಹಸೀನಾ ತುತ್ತಾಗಿದ್ದಾರೆ.

