– ಕೋಣ ಕಡಿಯಲು ಆಂಧ್ರದಿಂದ ಬರುತ್ತಾನೆ ಭೂತಬಿಲ್ಲಿ
– ಪ್ರಾಣಿಬಲಿಯಿಂದ ಸಂಪೂರ್ಣ ರಕ್ತಮಯವಾಗಿರುವ ಗ್ರಾಮಗಳು
ರಾಯಚೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೌಢ್ಯಾಚರಣೆಗಳಿಗೆ ಯಾವುದೇ ನಿರ್ಬಂಧಗಳು ಬಿದ್ದಿಲ್ಲ. ಮೂಢನಂಬಿಕೆಯ ಆಚರಣೆ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದರೂ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ. ರಾಯಚೂರಿನಲ್ಲಿ ನೂರಾರು ಪ್ರಾಣಿಗಳನ್ನ ದೇವರ ಹೆಸರಿನಲ್ಲಿ ಬಲಿ ಕೊಟ್ಟರೂ ಪೊಲೀಸ್ ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
Advertisement
ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಐದು ವರ್ಷಕ್ಕೆ ಒಮ್ಮೆ ನಡೆಯುವ ದ್ಯಾವಮ್ಮ ಜಾತ್ರೆಯಲ್ಲಿ ಕುರಿ, ಕೋಣಗಳ ಬಲಿ ಬೇಕೆ ಬೇಕಂತೆ. ಗ್ರಾಮ ದೇವತೆಗೆ ಹರಕೆ ತೀರಿಸಲು ಲೆಕ್ಕವಿಲ್ಲದಷ್ಟು ಕೋಣ, ಕುರಿ, ಮೇಕೆಗಳು ಪ್ರಾಣ ಕಳೆದುಕೊಳ್ಳುತ್ತಿವೆ. ತಾಲೂಕಿನ ಕುರಡಿ ಹಾಗೂ ಮಾಚನೂರು ಗ್ರಾಮದಲ್ಲಿ ಎಗ್ಗಿಲ್ಲದೆ ಪ್ರಾಣಿ ಬಲಿ ನಡೆದಿದೆ. ದ್ಯಾವಮ್ಮ, ದುರುಗಮ್ಮ ದೇವಿ ಜಾತ್ರೆ ಹೆಸರಿನಲ್ಲಿ ಸುಮಾರು 30 ಕೋಣ, 300ಕ್ಕೂ ಹೆಚ್ವು ಕುರಿ-ಮೇಕೆಗಳನ್ನ ಬಲಿ ಕೊಡಲಾಗಿದೆ. ಜಾತ್ರೆಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯಿದ್ದರೂ ಸಾರ್ವಜನಿಕವಾಗಿ ಹಗಲು, ರಾತ್ರಿ ವೇಳೆ ನಿರಂತರವಾಗಿ ಪ್ರಾಣಿ ಬಲಿ ನಡೆಸಲಾಗಿದೆ.
Advertisement
Advertisement
ಪ್ರಾಣಿ ಬಲಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಡೆಯಲು ಸಾಧ್ಯವಾಗಿಲ್ಲ. ಇಡೀ ಕುರಡಿ ಹಾಗೂ ಮಾಚನೂರು ಗ್ರಾಮಗಳು ಪ್ರಾಣಬಲಿಯಿಂದ ರಕ್ತಮಯವಾಗಿದೆ. ಕೋಣ ಕಡಿಯಲು ಲಕ್ಷಾಂತರ ರೂಪಾಯಿ ಕೊಟ್ಟು ಆಂಧ್ರದಿಂದ ವ್ಯಕ್ತಿಗಳನ್ನ ಕರೆಸಲಾಗಿದೆ. ಅವರನ್ನ ಭೂತಬಿಲ್ಲಿ ಅಂತ ಕರೆಯುತ್ತಾರೆ. ರಾತ್ರಿವೇಳೆ ಕೋಣಗಳಿಗೆ ಸುಣ್ಣದ ನೀರನ್ನ ಕುಡಿಸಿ ಬಲಿ ಕೊಡಲಾಗಿದೆ. ಆದ್ರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮಾತ್ರ ನಮ್ಮ ಸಿಬ್ಬಂದಿಯನ್ನ ನೇಮಿಸಿದ್ದೇವೆ ಅಂತಹದ್ದೇನು ನಡೆದಿಲ್ಲ ಎಂದು ಘಟನೆಯನ್ನ ಮುಚ್ಚಿಹಾಕಲು ಮುಂದಾಗಿದ್ದಾರೆ.
Advertisement
ಐದು ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಯಲ್ಲಿ ಕುರಿ, ಕೋಣಗಳನ್ನ ಬಲಿ ಕೊಡಲು ಒಂದು ತಿಂಗಳಿನಿಂದ ಸಾಕುತ್ತಾರೆ. ಹರಕೆ ತೀರಿಸಿಕೊಳ್ಳಲು ದ್ಯಾವಮ್ಮ ದೇವಿ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರೆ. ರಾತ್ರಿಯಲ್ಲಾ ಗ್ರಾಮದಲ್ಲಿ ವಿದ್ಯುತ್ ತೆಗೆದು ಕೇವಲ ಪಂಜನ್ನ ಹಿಡಿದು ಬೂತಬಿಲ್ಲಿ ಮೂಲಕ ಕೋಣ ಬಲಿ ಕೊಟ್ಟಿದ್ದಾರೆ. ಬೆಳಗ್ಗೆ ಕುರಿಗಳ ಬಲಿ ನಿರಂತರವಾಗಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಪ್ಪಿತಸ್ಥರನ್ನ ಪತ್ತೆಹಚ್ವಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.
ಆದರೆ ರಾಜಾರೋಷವಾಗಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆದಿದ್ದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೂಢ ಆಚರಣೆಗಳು ಮುಂದುವರೆದಿರುವುದು ವಿಪರ್ಯಾಸ. ಕನಿಷ್ಠ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.