ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಂಡಸಾಗರ ಗ್ರಾಮದ ಕುರಿಗಾಯಿಯ ಬರಗಾಲದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಖತ್ ವೈರಲ್ ಆಗಿದೆ.
ಗುಂಡಸಾಗರ ಗ್ರಾಮದ ಕುರಿಗಾಯಿ ಮೌನೇಶ್ ಹಾಡಿರುವ ಹಾಡು ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ. ಕುರಿ ಕಾಯುತ್ತಲೇ ಮೌನೇಶ್ ತಾನೇ ಸ್ವಂತವಾಗಿ ಬರಗಾಲದ ಮೇಲೆ ಹಾಡೊಂದನ್ನು ರಚಿಸಿ ಹಾಡಿದ್ದಾರೆ. ಅಲ್ಲದೆ ತಾನು ಹಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಸದ್ಯ ಮೌನೇಶ್ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Advertisement
Advertisement
ಏಳನೇ ತರಗತಿವರೆಗೆ ಓದಿರುವ ಮೌನೇಶ್, `ಯಾಕಾರ ಬಂತಪ್ಪ ಬ್ಯಾಸಗಿ ಕಾಲ, ಬಿಸಿಲಾಗ ತಿರುಗಿ ತಿರುಗಿ ಸಾಕಾತು ಜೀವನ’ ಅನ್ನೋ ಬರಗಾಲದ ಬಗ್ಗೆ ಹಾಡು ರಚಿಸಿ ಹಾಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಈ ವರ್ಷವಂತೂ ಭೀಕರ ಬರಗಾಲ ಆವರಿಸಿದ್ದು, ಬಿಸಿಲಿನ ತಾಪ ತಾಳಲಾರದೇ ಜನ ಮನೆಯಿಂದ ಹೊರ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ವಿಷಯವನ್ನಾಗಿಸಿಕೊಂಡು ಕುರಿಗಾಯಿ ಮೌನೇಶ್ ಹಾಡನ್ನು ರಚಿಸಿ ಅದಕ್ಕೆ ಧ್ವನಿ ನೀಡಿದ್ದಾರೆ.