ಶಿವಮೊಗ್ಗ: ಬೆಂಗಳೂರಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಮಾಡಲಾಗುತ್ತಿದೆ.
ಹಿರಿಯ ಸಾಹಿತಿ ನಾ.ಡಿಸೋಜಾ ನೇತೃತ್ವದಲ್ಲಿ ರಚನೆ ಆಗಿರುವ ಹೋರಾಟ ಸಮಿತಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಕರೆ ನೀಡಿತ್ತು. ಶರವಾತಿ ನದಿಗಾಗಿ ಕರೆ ನೀಡಲಾಗಿದ್ದ ಬಂದ್‍ಗೆ ಸಾಗರ, ಹೊಸನಗರ, ಸೊರಬ, ಶಿವಮೊಗ್ಗ, ತೀರ್ಥಹಳ್ಳಿ ತಾಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿಕಾರಿಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಫೋಷಣೆ ಮಾಡಲಾಗಿದೆ. ಇನ್ನೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿ ಇಲ್ಲದೆ, ಸಿಗಂದೂರಿಗೆ ಬರುವ ಭಕ್ತರಿಗೆ ಬಸ್ ಸಿಗದೆ ಸಮಸ್ಯೆ ಆಗಲಿದೆ. ಜೊತೆಗೆ ಹಲವಾರು ಸಂಘಟನೆಗಳ ಸದಸ್ಯರು ಗುಂಪು ಗುಂಪಾಗಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಡಲ್ಲ ಎಂಬ ಫೋಷಣೆ ಕೂಗುತ್ತಾ ಮೆರವಣಿಗೆ ಮತ್ತು ಬೈಕ್ ರ‍್ಯಾಲಿ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘವೂ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲಿಸಿವೆ.
ಕಳೆದ ದಿನವೇ ಬಂದ್ ಹಿನ್ನೆಲೆಯಲ್ಲಿ ಹೋರಾಟದ ಕೇಂದ್ರ ಸಮಿತಿಯು ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಬಂದ್ ಯಶಸ್ವಿ ಮಾಡಲು ನಾನಾ ಸಂಘಟನೆಗಳಿಗೆ ಮನವಿ ಮಾಡಿತ್ತು. ಸಾಗರ ತಾಲೂಕಿನ ಪ್ರತೀ ಹಳ್ಳಿಯಲ್ಲೂ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿತ್ತು.
ಅಷ್ಟೇ ಅಲ್ಲದೆ ನಾನಾ ಬಗೆಯಲ್ಲಿ ವಿರೋಧ ದಾಖಲಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಹೋರಾಟದ ಅಂಗವಾಗಿ ಹೊಸನಗರದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಯುವಕರು ಬೈಕ್ ಜಾಥಾ ಮೂಲಕ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ತಲುಪಿ ಯೋಜನೆ ವಿರೋಧಿಸಿ ಮನವಿ ಕೊಟ್ಟಿದ್ದಾರೆ.