ಅಮೆರಿಕ ಪಾಲಾದ ಅಧ್ಯಕ್ಷ ಶರಣ್‍ರ ಹೊಸ ಗೆಟಪ್!

Public TV
1 Min Read
Adhyaksha In America Sharan 2

ಬೆಂಗಳೂರು: ಹಾಸ್ಯ ಕಲಾವಿದರಾಗಿದ್ದ ಕಾಲದಿಂದ ಮೊದಲ್ಗೊಂಡು, ನಾಯಕ ನಟನಾಗಿರೋ ಈ ಕಾಲದವರೆಗೂ ಶರಣ್ ನಿರ್ವಹಿಸಿರುವ ಪಾತ್ರಗಳೇ ವೈವಿಧ್ಯಮಯವಾದದ್ದು. ಯಾವ ಪಾತ್ರಗಳಿಗೇ ಆದರೂ ಒಗ್ಗಿಕೊಳ್ಳುವ, ನ್ಯಾಯ ಸಲ್ಲಿಸುವ ಛಾತಿಯೇ ಶರಣ್ ಅವರನ್ನು ನಾಯಕನನ್ನಾಗಿಯೂ ನೆಲೆಗಾಣಿಸಿರೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಹಾಸ್ಯ ಪ್ರಧಾನ ಪಾತ್ರಗಳಿಗೇ ಪ್ರಸಿದ್ಧಿ ಪಡೆದುಕೊಂಡಿರುವವರು. ಆದರೆ ಹಾಸ್ಯದಾಚೆಯ ಪಾತ್ರಗಳಿಗೂ ಕೂಡ ಅಚ್ಚರಿದಾಯಕವಾಗಿ ನ್ಯಾಯ ಸಲ್ಲಿಸೋ ಶಕ್ತಿ ಶರಣ್ ಅವರಿಗಿದೆ. ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ ಶರಣ್ ಅವರನ್ನು ಅಂತಹ ಭಿನ್ನ ಪಾತ್ರದಲ್ಲಿ ನೋಡೋ ಭಾಗ್ಯ ಖಂಡಿತಾ ಅವರ ಅಭಿಮಾನಿ ಪ್ರೇಕ್ಷಕರಿಗೆ ಸಿಗಲಿದೆ.

Adhyaksha In America Sharan 6

ಈ ಚಿತ್ರದ ಕಥೆಯಲ್ಲಿಯೇ ಶರಣ್ ಅವರನ್ನು ಈವರೆಗಿನದಕ್ಕಿಂತಲೂ ಭಿನ್ನವಾಗಿ ತೋರಿಸೋ ವಿಪುಲ ಅವಕಾಶಗಳಿದ್ದವಂತೆ. ಅಷ್ಟಕ್ಕೂ ನವ ನಿರ್ದೇಶಕ ಯೋಗಾನಂದ್ ಆರಂಭ ಕಾಲದಿಂದಲೂ ತಾನು ಶರಣ್ ಅವರಿಗೊಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಹೊಂದಿದ್ದವರು. ಇದಲ್ಲದೇ ಶರಣ್ ಅವರನ್ನು ಈವರೆಗಿನದ್ದಕ್ಕಿಂತಲೂ ಬೇರೆಯದ್ದೇ ಥರದ ಪಾತ್ರದಲ್ಲಿ ತೋರಿಸಬೇಕೆಂಬ ಹಂಬಲವೂ ಅವರದ್ದಾಗಿತ್ತು. ಕಡೆಗೂ ಮೊದಲ ಚಿತ್ರದಲ್ಲಿಯೇ ಅದು ಸಾಕಾರಗೊಂಡಂತಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಮತ್ತು ಟಿ.ಜಿ ವಿಶ್ವಪ್ರಸಾದ್ ಅವರ ಸಾಥ್‍ನೊಂದಿಗೆ ಯೋಗಾನಂದ್ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಶರಣ್ ಈವರೆಗಿನ ಪಾತ್ರಗಳಿಗಿಂತಲೂ ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂದಾಕ್ಷಣ ಅವರ ಪಾತ್ರಕ್ಕೆ ಹಾಸ್ಯದ ಟಚ್ ಕಡಿಮೆ ಇದೆಯಾ ಎಂಬಂಥಾ ಅನುಮಾನ ಕಾಡೋದು ಸಹಜವೇ. ಅವರ ಪಾತ್ರ ಹಾಸ್ಯಕ್ಕೇನೂ ತತ್ವಾರ ಮಾಡೋದಿಲ್ಲ. ಆದರೆ ಆ ಪಾತ್ರ ಈವರೆಗೂ ಶರಣ್ ನಿರ್ವಹಿಸಿರೋ ಪಾತ್ರಗಳಂತಿಲ್ಲ. ಅದಕ್ಕೆ ಭಿನ್ನವಾದ ಶೇಡುಗಳಿವೆ. ಅದೆಲ್ಲವೂ ಕೂಡಾ ಶರಣ್ ಅಭಿಮಾನಿಗಳನ್ನೂ ಥ್ರಿಲ್ ಆಗಿಸುವಂತಿವೆ ಎಂಬ ಭರವಸೆ ನಿರ್ದೇಶಕ ಯೋಗಾನಂದ್ ಅವರಿಗಿದೆ. ಶರಣ್ ಕೂಡ ಆಗಾಗ ಈ ಬದಲಾವಣೆಯ ಸುಳಿವು ನೀಡುತ್ತಾ ಬಂದಿದ್ದಾರೆ. ಇದೆಲ್ಲದರ ನಿಜವಾದ ಹೂರಣ ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *