– ನಾವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದು ಬರುತ್ತೇವೆ
ಶಿವಮೊಗ್ಗ: ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಜೆಡಿಎಸ್ (JDS) ಶಾಸಕಿ ಶಾರದಾ ಪೂರ್ಯನಾಯ್ಕ್ (Sharada Puryanaik) ಅವರು ಸಿ.ಪಿ ಯೋಗೇಶ್ವರ್ (C.P Yogeshwar) ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬರುತ್ತೇನೆ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅವರು ಯಾರು? ನಮ್ಮನ್ನು ಕೊಂಡುಕೊಂಡಿದ್ದಾರಾ? ನಾವೇನು ಅವರನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.
ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಅವರು ಕಲಿತುಕೊಳ್ಳಬೇಕು. ನಮಗೆ ಟಾಸ್ಕ್ ಕೊಟ್ಟರೆ ಅವರನ್ನು ಸೆಳೆಯುತ್ತೇವೆ. ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು. ಅವರಿಗೆ ಇದನ್ನೇ ಮಾಡಿ ಅಭ್ಯಾಸ, ಹಾಗಾಗಿ ಅವರು ಇದನ್ನೇ ಹೇಳುತ್ತಾರೆ. ಹೋದ ಕಡೆಯಲ್ಲಿ ಅದನ್ನೇ ನೆನಪಿಸಿಕೊಳ್ಳುತ್ತಾರೆ. ಅಹಂ ಇರುತ್ತದೆಯಲ್ಲ ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಯೋಗೇಶ್ವರ್ ಯಾರು ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಎಂದು ಕಿಡಿಕಾರಿದ್ದಾರೆ.
ನಮ್ಮ ಪಕ್ಷ ಫೀನಿಕ್ಸ್ ಹಕ್ಕಿ ಇದ್ದ ಹಾಗೆ, ನಾವು ಮತ್ತೆ ಎದ್ದು ಬರುತ್ತೇವೆ ಎಂಬ ದೃಢವಾದ ನಂಬಿಕೆ ಇದೆ. ರಾಜಕಾರಣದಲ್ಲಿ ಜೆಡಿಎಸ್‍ಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ನನ್ನ ಪ್ರಕಾರ ಜೆಡಿಎಸ್‍ನಲ್ಲೆ ಎಲ್ಲರೂ ಇರುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.