-ಅಂದು ಸಿಎಂ ಸ್ಥಾನಕ್ಕಾಗಿ ಪಕ್ಷ ತೊರೆದಿದ್ದ ಶರದ್ ಪವಾರ್
-ಇಂದು ಅಣ್ಣನ ಮಗನಿಂದ ಹಿಸ್ಟರಿ ರಿಪೀಟ್
ಮುಂಬೈ: ಮಹಾರಾಷ್ಟ್ರದ ರಾಜಕಾರಣದಲ್ಲಿ 1978ರ ಇತಿಹಾಸ ಮರುಕಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದು ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದ ಶರದ್ ಪವಾರ್ ಅವರ ನಡೆಯನ್ನ ಸೋದರನ ಮಗ ಅಜಿತ್ ಪವಾರ್ ಅನುಸರಿಸಿದ್ರಾ ಎಂಬ ಚರ್ಚೆಗಳು ಮಹಾ ಅಂಗಳದಲ್ಲಿ ಆರಂಭಗೊಂಡಿವೆ. ಅಜಿತ್ ಪವಾರ್ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ದೇವೇಂದ್ರ ಫಡ್ನವೀಸ್ ಎರಡನೇ ಬಾರಿ ಸಿಎಂ ಆಗಿದ್ದಾರೆ. ಇತ್ತ ಸುದ್ದಿಗೋಷ್ಠಿ ನಡೆಸಿದ ಅಜಿತ್ ಪವಾರ್ ನಿರ್ಧಾರಕ್ಕೂ ಎನ್‍ಸಿಪಿಗೂ ಯಾವುದೇ ಸಂಬಂಧವಿಲ್ಲ. ಅದು ಹೇಗೆ ಬಹುಮತ ಸಾಬೀತು ಮಾಡ್ತಾರೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಸವಾಲ್ ಹಾಕಿದ್ದಾರೆ.
1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಹ ಸೋತ ಪರಿಣಾಮ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮಹಾರಾಷ್ಟ್ರದಲ್ಲಿ ಸಹ ಕಾಂಗ್ರೆಸ್ ಹಿರಿಯ ನಾಯಕರು ಸೋಲು ಕಂಡಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ಅಂದಿನ ಮಹಾರಾಷ್ಟ್ರ ಸಿಎಂ ಶಂಕರ್ ರಾವ್ ಚವಾಣ್ ತಮ್ಮ ಪದವಿಗೆ ರಾಜೀನಾಮೆ ನೀಡಿದ್ದರು. ವಸಂತ್ ದಾದಾ ಪಾಟೀಲ್ ಸಿಎಂ ಆಗಿ ಆಯ್ಕೆಯಾದರು. ನಂತರದ ಬೆಳವಣಿಗೆಯಲ್ಲಿ ಕೈ ಪಕ್ಷ ಇಬ್ಭಾಗವಾಯ್ತು. ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಐ) ಎಂದು ವಿಗಂಡನೆ ಆಯ್ತು. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ
ಕಾಂಗ್ರೆಸ್(ಯು)ಗೆ ಶರದ್ ಪವಾರ್ ಸೇರ್ಪಡೆ:
ಗುರು ಯಶವಂತ್ ರಾವ್ ಪಾಟೀಲ್ ಜೊತೆಯಲ್ಲಿ ಶರದ್ ಪವಾರ್ ಕಾಂಗ್ರೆಸ್ (ಯು) ಸೇರಿದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಮತ್ತು ಕಾಂಗ್ರೆಸ್(ಐ) ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದವು. ಫಲಿತಾಂಶದ ಬಳಿಕ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎರಡು ಪಾರ್ಟಿಗಳು ಮೈತ್ರಿ ರಚಿಸಿಕೊಂಡು ಸರ್ಕಾರ ರಚಿಸಿದ್ದರಿಂದ ವಸಂತ್ ದಾದಾ ಪಾಟೀಲ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೈತ್ರಿ ಸರ್ಕಾರದಲ್ಲಿ ಶರದ್ ಪವಾದ್ ಉದ್ಯೋಗ ಮತ್ತು ಕಾರ್ಮಿಕ ಸಚಿವರಾಗಿದ್ದರು. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್
ಜುಲೈ 1978ರಲ್ಲಿ ಶರದ್ ಪವಾರ್ ತಮ್ಮ ಗುರು ಯಶವಂತ್ ರಾವ್ ಪಾಟೀಲ್ ಸಲಹೆ ಮೇರೆಗೆ ಬೆಂಬಲಿಗರೊಂದಿಗೆ ಕಾಂಗ್ರೆಸ್(ಯು)ನಿಂದ ಹೊರಬಂದು ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಮೈತ್ರಿ ಬಳಿಕ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿ 38ನೇ ವಯಸ್ಸಿನಲ್ಲಿಯೇ ಶರದ್ ಪವಾರ್ ಸಿಎಂ ಆದರು. ನಂತರ ಯಶವಂತ್ ಪಾಟೀಲ್ ಸಹ ಶರದ್ ಪವಾರ್ ಪಕ್ಷ ಸೇರ್ಪಡೆಗೊಂಡರು. 1980ರಲ್ಲಿ ಇಂದಿರಾ ಗಾಂಧಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶರದ್ ಪವಾರ್ ನೇತೃತ್ವದ ಪ್ರೊಗ್ರೆಸಿವ್ ಫ್ರಂಟ್ ಸರ್ಕಾರ ಬಿತ್ತು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ
1987ರಲ್ಲಿ ಕಾಂಗ್ರೆಸ್(ಯು) ಕಾಂಗ್ರೆಸ್ ನಲ್ಲಿ ವಿಲೀನವಾಯ್ತು. 1988, 1990ರಲ್ಲಿ ಮತ್ತೆ ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. 1999ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದನ್ನು ಪ್ರಶ್ನಿಸಿ ಶರದ್ ಪವಾರ್ ಪಕ್ಷದಿಂದ ಹೊರ ಬಂದಿದ್ದರು. ಪಿಎ ಸಂಗ್ಮಾ, ತರೀಖ್ ಅನ್ವರ್ ಸೇರಿ ಎನ್‍ಸಿಪಿ ರಚನೆ ಮಾಡಿ, ಪಕ್ಷದ ಅಧ್ಯಕ್ಷರಾದರು. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ
ಹಿಸ್ಟರಿ ರಿಪೀಟ್: ಚಿಕ್ಕಪ್ಪನ ಪಕ್ಷದಿಂದ ಹೊರಬಂದಿರುವ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಸೂಚಿಸಿ ಡಿಸಿಎಂ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಜನರು ನಿದ್ದೆಗಣ್ಣಿನಲ್ಲಿರುವಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣದಲ್ಲಿಯೇ ಪ್ರಧಾನಿ ಮೋದಿ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದರು.