ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ “ಸಿನಿಮಾದಲ್ಲಿ ನಟಿಯರಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ, ಸಿನಿಮಾದ ಬಗ್ಗೆಯೂ ಯಾವುದೇ ಮಾಹಿತಿ ಕೊಡುವುದಿಲ್ಲ” ಎಂದು ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ತಮ್ಮ ಮನವಿಯನ್ನು ಆಲಿಸಿದ ಪ್ರತಿಯೊಬ್ಬರಿಗೂ ಹಬ್ಬದ ದಿನದಂದು ಧನ್ಯವಾದ ತಿಳಿಸಿದ್ದಾರೆ.
ಶಾನ್ವಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಪಯಿಂದ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತಾ, ನನ್ನ ಇತ್ತೀಚಿನ ‘ಮನವಿಯನ್ನು’ ಆಲಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.
ಮೊದಲನೆಯದಾಗಿ, ಶ್ರೀ ಸಲಾಂ ಅವರಂತ ನಿರ್ಮಾಪಕರು ನನ್ನ ದುಗುಡವನ್ನು ಅರ್ಥ ಮಾಡಿಕೊಂಡಿರುವುದು ತುಂಬಾ ಸಂತಸದ ವಿಷಯ. ಒಂದು ಚಿತ್ರಕ್ಕೆ ಏನು ಅವಶ್ಯಕವೆಂಬುದು ನಿಜವಾಗಿಯೂ ಆ ಚಿತ್ರತಂಡದ ವಿವೇಚನೆಗೆ ಬಿಟ್ಟದ್ದು, ಅದು ನನಗೂ ಅರಿವಿದೆ. ಆದರೆ ಅದರ ಬದಲಾವಣೆಯ ಮಾಹಿತಿ ಆ ಚಿತ್ರಕ್ಕೆ ಸಂಬಂಧ ಪಟ್ಟ ಎಲ್ಲರಿಗೂ ತಿಳಿಸುವುದು ಕರ್ತವ್ಯವು ಸರಿಯಷ್ಟೆ. ಗೀತಾ ಚಲನಚಿತ್ರ ನಿಮ್ಮೆಲ್ಲರಂತೆಯೆ ನನಗೂ ಹೆಮ್ಮೆಯ ವಿಷಯ.
ನನ್ನ ಕಳಕಳಿಯ ಪ್ರಾರ್ಥನೆ ಕೇವಲ ಒಂದು ಚಿತ್ರಕ್ಕೆ ಮೀಸಲಾಗದೆ, ಈ ಹಿಂದೆಯೂ ಈ ರೀತಿಯ ಹಲವು ಸನ್ನಿವೇಶಗಳ ಪ್ರತೀಕವಾಗಿ ಹೊರ ಬಂದ ಕಾಳಜಿಯ ಮಾತುಗಳು. ಇದು ನನ್ನಂತಹ ನಟ, ನಟಿಯರಿಗೆಲ್ಲರನ್ನು ಕಾಡುವ ವಿಚಾರ. ಇಂತಹ ವಿಚಾರಗಳನ್ನು ಭವಿಷ್ಯದಲ್ಲಿ ಯಾರೊಂದಿಗೂ ಮರುಕಳಿಸದಿರಲೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಪಬ್ಲಿಕ್ ಜೊತೆ ಮಾತನಾಡಿದ ಶಾನ್ವಿ, ನಾನು ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ. ನಟಿಯರು ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರಲ್ಲ, ವೃತ್ತಿಪರತೆಯನ್ನು ಹೊಂದಿರಲ್ಲ ಎಂದು ಹಲವರು ದೂರುತ್ತಾರೆ. ಆದ್ರೆ ನಟಿಯರು ಸಹ ಸಿನಿಮಾದ ಒಂದು ಭಾಗವಾಗಿ ಇರ್ತಾರೆ ಎಂದು ಯಾರೂ ತಿಳಿದುಕೊಳ್ಳಲ್ಲ. ಸಿನಿಮಾ ಚಿತ್ರೀಕರಣ ಯಾವ ಹಂತದಲ್ಲಿದೆ? ಡಬ್ಬಿಂಗ್ ನಡೆಯುತ್ತಿದ್ದೆಯಾ? ಚಿತ್ರದ ಯಾವ ವಿಷಯಗಳನ್ನು ಸಹ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಲ್ಲ. ನಟರಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ನಮಗೆ ನೀಡಲ್ಲ ಎಂಬ ಬೇಸರದ ನುಡಿಗಳನ್ನ ಕೆಲವು ಸಾಲುಗಳಲ್ಲಿ ಬಹಿರಂಗ ಪಡಿಸಿದ್ದೇನೆ ಎಂದಿದ್ದರು.
Again to my dear colleagues and media…. ???? pic.twitter.com/52vEMYFzBa
— shanvi srivastava (@shanvisrivastav) October 7, 2019
ಚಿತ್ರರಂಗದಲ್ಲಿ ನನ್ನೊಬ್ಬಳಿಗೆ ಈ ರೀತಿ ಆಗಿಲ್ಲ. ಹಲವರು ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನಮ್ಮನ್ನು ದೂರುವುದಕ್ಕಿಂತ ಅವಕಾಶಗಳನ್ನು ನೀಡಿದ್ರೆ ನಾವು ಏನು ಎಂಬುದನ್ನ ತೋರಿಸುತ್ತೇವೆ. ನನ್ನಲ್ಲಿ ಹುದುಗಿಕೊಂಡಿದ್ದ ಕೆಲ ಮಾತುಗಳನ್ನು ಹಂಚಿಕೊಂಡಿದ್ದೇನೆಯೇ ಹೊರತು ಯಾರನ್ನು ದೂರುತ್ತಿಲ್ಲ. ಸಿನಿಮಾ ಅಂಗಳದಲ್ಲಿ ಈ ರೀತಿಯ ಸನ್ನಿವೇಶಗಳನ್ನು ಹಲವು ನಟಿಯರು ಸೇರಿದಂತೆ ಕಲಾವಿದರು ಎದುರಿಸುತ್ತಾರೆ. ಹಾಗಾಗಿ ನನ್ನ ವೈಯಕ್ತಿಕ ಕೆಲ ಅಭಿಪ್ರಾಯಗಳನ್ನು ಬರೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.