Connect with us

Chitradurga

ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ- ಸ್ವಂತ ದುಡಿಮೆಯಲ್ಲೇ ಮಠ, ಶಾಲೆ ನಡೆಸ್ತಿರೋ ಶಾಂತವೀರ ಶ್ರೀಗಳು

Published

on

ಚಿತ್ರದುರ್ಗ: ಸಾಮಾನ್ಯವಾಗಿ ಸ್ವಾಮೀಜಿಗಳು ಭಕ್ತಾದಿಗಳಿಂದ, ಸರ್ಕಾರದಿಂದ ದೇಣಿಗೆ ಪಡೆದು ಮಠ ನಡೆಸ್ತಾರೆ. ಆದ್ರೆ ಕಾವಿಧಾರಿಯೊಬ್ಬರು ಕಾಯಕ ಯೋಗಿಯಾಗಿದ್ದಾರೆ. ದಾಳಿಂಬೆ ಕೃಷಿ ಮೂಲಕ ಅನ್ನದಾತರಿಗೆ ಮಾದರಿಯಾಗಿದ್ದಾರೆ. ಚಿತ್ರದುರ್ಗದಿಂದ ಬಂದಿರೋ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿಗಳೇ ಇಂದಿನ ನಮ್ಮ ಪಬ್ಲಿಕ್ ಹೀರೋ.

ಸತತ ಬರಗಾಲದಿಂದ ಇಡೀ ರಾಜ್ಯದ ಜನರ ಬದುಕೇ ದುಸ್ತರವಾಗಿದೆ. ಆದ್ರೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕುಂಚಿಟಿಗ ಪೀಠದ ಶಾಂತವೀರ ಶ್ರೀಗಳು ವೈಜ್ಞಾನಿಕ ಕೃಷಿ ಮೂಲಕ ಸಾಧನೆ ಮಾಡಿದ್ದಾರೆ. ಹೊಸಕೆರೆ ಗ್ರಾಮದ ಬಳಿ ಗುತ್ತಿಗೆ ಆಧಾರದ ಮೇಲೆ 20 ಎಕರೆ ಜಮೀನು ಪಡೆದು ದಾಳಿಂಬೆ ಬೆಳೆದು ರೈತರ ಗಮನ ಸೆಳೆದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದೇ ದಾಳಿಂಬೆ ಬೆಳೆ ಒಣಗಿತ್ತು. ಈ ವರ್ಷ ಹನಿ ನೀರಾವರಿ ಬಳಸಿ, ಯಾವುದೇ ಔಷಧಿ ಸಿಂಪಡಿಸದೆ ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ದಾಳಿಂಬೆ ಗೊಂಚಲು ಅರಳುವಂತೆ ಮಾಡಿದ್ದಾರೆ. ಒಂದೊಂದು ಗಿಡದಲ್ಲಿ ನೂರು ಹಣ್ಣುಗಳು ಬಿಟ್ಟಿವೆ. 3 ಎಕರೆಗೆ ಕೇವಲ 2 ಲಕ್ಷ ರೂಪಾಯಿ ಖರ್ಚು ಮಾಡಿ 70 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ದಾಳಿಂಬೆ ಬೆಳೆಯಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಪಡೆದು ದೊಡ್ಡದಾದ ಮಠ ಕಟ್ಟಿ ಶಾಲೆಯನ್ನೂ ಆರಂಭಿಸಿದ್ದಾರೆ.

ಶ್ರೀಗಳು ಪಾಳುಬಿದ್ದ ಜಮೀನಿನಲ್ಲಿ ಕೃಷಿ ಮಾಡುತ್ತೇನೆ ಎಂದಾಗ ಗೇಲಿ ಮಾಡಿದ್ದ ಅದೆಷ್ಟೋ ಜನರು ಈಗ ಕೃಷಿ ಸಾಧನೆ ಕಂಡು ಬೆರಗಾಗಿದ್ದಾರೆ. ಕಾವಿಯೊಳಗೊಬ್ಬ ಕೃಷಿನೂ ಇದ್ದಾನೆ ಅನ್ನೋದನ್ನ ಈ ಶ್ರೀಗಳು ಸಾಬೀತು ಮಾಡಿದ್ದಾರೆ.

https://www.youtube.com/watch?v=Pkhe-QYR8fE

Click to comment

Leave a Reply

Your email address will not be published. Required fields are marked *