ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ – ಸಂಪೂರ್ಣ ಚೇತರಿಕೆ ಕಂಡ ಡಾ.ಶಂಕರೇಗೌಡ

Public TV
2 Min Read
SHANKAREGOWDA

ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂಪಾಯಿ ವೈದ್ಯರೆಂದು ಖ್ಯಾತಿ ಹೊಂದಿರುವ ಡಾ. ಶಂಕರೇಗೌಡ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

Shankaregowda 1

ಫೋರ್ಟಿಸ್ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗವಾಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದರು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು. ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು, ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ ಎಂದರು. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

SHANKARE GOWDA 1

42 ವರ್ಷದಿಂದ ಸೇವೆ:
ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ. ಮುಂದೆಯೂ ಕೂಡ ಈ ವೃತ್ತಿ ಮುಂದುವರಿಸಿಕೊಂಡು ಹೋಗಲಿದ್ದೇನೆ. ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ. 2010ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಡಲಿಲ್ಲ ಎಂದು ನುಡಿದರು. ಇದನ್ನೂ ಓದಿ: ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ

ಹೃದಯ ತಜ್ಞ ಡಾ. ವಿವೇಕ್ ಜವಳಿ ಮಾತನಾಡಿ, 67 ವರ್ಷ ವಯಸ್ಸಿನ ಡಾ. ಶಂಕರೇಗೌಡ ಅವರು ಮಂಡ್ಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದ ಅವರ ಹೃದಯವು ಹೆಚ್ಚಿನ ಹಾನಿಗೆ ಒಳಗಾಗಿತ್ತು. ಪ್ರಾರಂಭದಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಿಸಿತ್ತಾದರೂ ಎದೆನೋವು ಹೆಚ್ಚಳವಾದ್ದರಿಂದ ಅವರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಲವು ಪರೀಕ್ಷೆಗಳ ನಂತರ ಅವರಿಗೆ ಪರಿಧಮನಿಯ ಸಿಂಡ್ರೋಮ್ ಮತ್ತು ಮಯೋಕಾರ್ಡಿಯಲ್ ಇನ್‍ಫೆಕ್ಷನ್ ಆಗಿರುವುದು ಕಂಡು ಬಂತು. ಜೊತೆಗೆ, ಟ್ರಿಪಲ್ ವೆಸೆಲ್ ಪರಿಧಮನಿಯ ಕಾಯಿಲೆಯಿಂದಲೂ ಸಹ ಬಳಲುತ್ತಿದ್ದು, ಉಸಿರಾಟದ ತೊಂದರೆಯನ್ನು ಹೊಂದಿದ್ದರು.

SHANKARE GOWDA

ಅದೃಷ್ಟವಶಾತ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮೇ ಮಧ್ಯದಲ್ಲಿ ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ನಂತರ ಅವರ ವಿಶ್ರಾಂತಿಗಾಗಿ ಮಂಡ್ಯಕ್ಕೆ ವಾಪಾಸ್ ಕಳುಹಿಸಲಾಗಿತ್ತು. ಅವರು ವಿಶ್ರಾಂತಿ ಪಡೆದು ಅವರ ಆರೋಗ್ಯ ಸ್ಥಿರವಾದ ಬಳಿಕ ಅವರಿಗೆ ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಲು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದೇವೆ. ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಶಂಕರೇಗೌಡ ಅವರು ಚೇತರಿಸಿಕೊಂಡಿದ್ದಾರೆ. 6 ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *