ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ `ನಕ್ಷತ್ರ’ ಪ್ರೀತಿಯಿಂದಾಗಿ ಸಂಪುಟ ವಿಸ್ತರಣೆ ದಿಢೀರ್ ಬುಧವಾರದಿಂದ ಇಂದಿಗೆ ಶಿಫ್ಟ್ ಆಗಿದೆ. ಇಂದು ಮಧ್ಯಾಹ್ನ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು ಸಚಿವರಾಗಿ ಪಕ್ಷೇತರ ಶಾಸಕರಾದ ಆರ್.ಶಂಕರ್, ನಾಗೇಶ್ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದರ ಹಿಂದೆ ದೋಸ್ತಿಗಳ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. ಅತೃಪ್ತರ ಬಂಡಾಯ ತಪ್ಪಿಸಲು ಮೈತ್ರಿ ನಾಯಕರು ಪ್ಲಾನ್ ಮಾಡಿದ್ರಾ ಅಥವಾ ಪಕ್ಷೇತರರನ್ನು ಬುಟ್ಟಿಗೆ ಹಾಕ್ಕಿಕೊಂಡು ಅತೃಪ್ತರ ಸದ್ದಡಗಿಸುವ ಪ್ರಯತ್ನ ಮಾಡಿದ್ರಾ ಅನ್ನೋ ಪ್ರಶ್ನೆ ಇದೀಗ ಕಾಡುತ್ತಿದೆ.
Advertisement
Advertisement
ದೋಸ್ತಿಗಳ ಲೆಕ್ಕಾಚಾರವೇನು?:
ಬಿಜೆಪಿ ಈಗ 105 ಸಂಖ್ಯಾಬಲ ಹೊಂದಿದೆ. ಇಬ್ಬರು ಪಕ್ಷೇತರರು ಸೇರಿದರೆ ಬಿಜೆಪಿ ಬಲ 107 ಆಗುತ್ತದೆ. ಆಪರೇಷನ್ ಕಮಲ ಮಾಡಿದರೆ ಬಿಜೆಪಿಗೆ ಬೆರಳೆಣಿಕೆ ಶಾಸಕರನ್ನ ಸೆಳೆಯೋದು ಸುಲಭವಾಗಲಿದೆ. ಪಕ್ಷೇತರರಿಗೆ ಸ್ಥಾನ ಕೊಡದಿದ್ದರೆ ಅವರು ಬಿಜೆಪಿಗೆ ಹೋಗೋದು ಪಕ್ಕಾ ಆಗುತ್ತದೆ. ಜೊತೆಗೆ ಪಕ್ಷೇತರರಿಗೆ ರಾಜೀನಾಮೆ ಕೊಡಬೇಕೆಂಬ ರಿಸ್ಕ್ ಸಹ ಇರಲ್ಲ. ಆದರೆ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಸಂಪುಟ ಸ್ಥಾನ ಕೊಡದಿದ್ದರೆ ಅವರು ತಕ್ಷಣಕ್ಕೆ ರಾಜೀನಾಮೆ ಕೊಡಲು ಮುಂದಾಗಲ್ಲ. ಬಿಜೆಪಿಗೆ ಹೋಗಬೇಕಾದರೂ ರಾಜೀನಾಮೆ ಕೊಟ್ಟೇ ಹೋಗಬೇಕು. ಮತ್ತೆ ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಅತೃಪ್ತರಲ್ಲಿ ಇಲ್ಲ. ಜೊತೆಗೆ ಅತೃಪ್ತರ ಸಂಖ್ಯೆಯೂ ಸರ್ಕಾರ ಬೀಳಿಸುವಷ್ಟು ಸಂಖ್ಯೆಯಲ್ಲಿ ಇಲ್ಲ. ಹೀಗಾಗಿ ಸದ್ಯ ಪಕ್ಷೇತರರನ್ನು ಸಂಪುಟ ಸೇರಿಸಿಕೊಳ್ಳೋಣ ಎಂಬುದು ದೋಸ್ತಿಗಳ ಲೆಕ್ಕಾಚಾರವಾಗಿದೆ.
Advertisement
Advertisement
ಸ್ವಲ್ಪ ಸಮಯದ ಬಳಿಕ ಅತೃಪ್ತರ ನಡೆ ಗಮನಿಸಿ ಪುನಾರಚನೆ ಮಾಡಿದರೆ ಆಯ್ತು. ವಿಸ್ತರಣೆ ಬಳಿಕ ಬಂಡಾಯ ಹೆಚ್ಚಾದರೆ ಕೆಲವರಿಗೆ ಕೊಕ್ ಕೊಟ್ಟು ಅತೃಪ್ತರ ಸೇರ್ಪಡೆಗೆ ನಾಯಕರು ಚಿಂತಿಸಿದ್ದಾರೆ. ಇಷ್ಟೆಲ್ಲ ಪ್ಲಾನ್ ರೂಪಿಸಿಯೇ ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ಕೊಡಲು ದೋಸ್ತಿಗಳು ಮುಂದಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.