ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

Public TV
3 Min Read
shanghai lockdown

ಬೀಜಿಂಗ್: ಚೀನಾದ ನಗರ ಶಾಂಘೈನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಸರಕು ಸಾಗಣೆಗೆ ಪ್ರಮುಖ ಬಂದರು ತಾಣವಾಗಿದ್ದ ಶಾಂಘೈನಲ್ಲಿ ಲಾಕ್‌ಡೌನ್ ಘೋಷಿಸಿರುವುದು ಭಾರತಕ್ಕೆ ದೊಡ್ಡ ಪೆಟ್ಟು ನೀಡಿದೆ. ಭಾರತದ ಔಷಧೀಯ ಉದ್ಯಮಕ್ಕೆ ಆತಂಕ ಎದುರಾಗಿದೆ.

ಕೋವಿಡ್ ಏಕಾಏಕಿ ನಿಗ್ರಹಿಸಲು ಚೀನಾ ಹಂತಹಂತವಾಗಿ ಲಾಕ್‌ಡೌನ್ ಅನ್ನು ವಿಧಿಸಿದೆ. ಇದರಿಂದಾಗಿ ಅದರ ಎರಡು ಪ್ರಮುಖ ಬಂದರುಗಳಾದ ಶಾಂಘೈ ಮತ್ತು ಶೆನ್‌ಜೆನ್‌ನಲ್ಲಿ ಸರಕು ಸಾಗಣೆ ವಿಳಂಬವಾಗಿದೆ. ಶೆನ್‌ಜೆನ್‌ನಲ್ಲಿ ಕಾರ್ಗೋ ಕಾರ್ಯಾಚರಣೆಗಳು ಅಸ್ತವ್ಯಸ್ತಗೊಂಡಿವೆ. ವಿಶ್ವದ ಅತಿದೊಡ್ಡ ಕಂಟೈನರ್ ಶಿಪ್ಪಿಂಗ್ ಬಂದರಿಗೆ ನೆಲೆಯಾಗಿರುವ ಶಾಂಘೈನಲ್ಲಿ ಲಾಕ್‌ಡೌನ್ ವಿಧಿಸಿರುವುದು ಮುಂದಿನ ದಿನಗಳಲ್ಲಿ ಸರಕು ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ

india ports

ಔಷಧ ಬೆಲೆಯಲ್ಲಿ ಹೆಚ್ಚಳ
ಶಾಂಘೈನಲ್ಲಿ ಲಾಕ್‌ಡೌನ್ ವಿಧಿಸಿರುವುದು ಸರಕು ಸಾಗಣೆಗೆ ತಡೆಯಾಗಿದ್ದು, ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿದೆ ಎಂದು ಔಷಧಿ ಉದ್ಯಮದವರು ತಿಳಿಸಿದ್ದಾರೆ. ಔಷಧಿಗಳ ಬೆಲೆ ಮತ್ತು ಪ್ಯಾಕಿಂಗ್ ವೆಚ್ಚಗಳು ಈಗಾಗಲೇ ಹೆಚ್ಚಾಗಿವೆ ಎಂದು ಪ್ರಮುಖ ಫಾರ್ಮಾ ಕಂಪನಿಗಳಲ್ಲಿ ಒಂದಾದ ಮ್ಯಾನ್‌ಕೈಂಡ್ ಫಾರ್ಮಾದ ಕಾರ್ಯನಿರ್ವಾಹಕ ಅಧ್ಯಕ್ಷ ಆರ್‌ಸಿ ಜುನೇಜಾ ಹೇಳಿದ್ದಾರೆ.

ಚೀನಾ ಮೇಲೆ ಭಾರತ ಅವಲಂಬನೆ
ವಿಶ್ವದ ಮೂರನೇ ಅತಿ ದೊಡ್ಡ ಔಷಧ ಉತ್ಪಾದಕ ರಾಷ್ಟ್ರ ಭಾರತ. ಔಷಧ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳಲ್ಲಿ ಶೇ.70ನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಪ್ರಮುಖ ಆ್ಯಂಟಿಬಯೋಟಿಕ್, ಪ್ಯಾರಸಿಟಮಲ್, ಮಧುಮೇಹ ಮತ್ತು ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಔಷಧಗಳ ತಯಾರಿಕೆಯಲ್ಲಿ ಚೀನಾದ ಕಚ್ಚಾ ವಸ್ತುಗಳನ್ನು ಭಾರತದಲ್ಲಿ ಬಳಸಲಾಗುತ್ತದೆ. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

south korea covid seol

ದೇಶೀಯ ಕಂಪನಿಗಳಾದ ಲುಪಿನ್, ಸನ್ ಫಾರ್ಮಾಸ್ಯುಟಿಕಲ್ಸ್, ಗ್ಲೆನ್‌ಮಾರ್ಕ್, ಮ್ಯಾನ್‌ಕೈಂಡ್, ರೆಡ್ಡೀಸ್, ಟೊರೆಂಟ್, ಅರಬಿಂದೋ ಫಾರ್ಮಾ, ಅಬಾಟ್ ಮತ್ತು ಇತರ ಹಲವಾರು ಕಂಪನಿಗಳು ಚೀನಾದ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಭಾರತಕ್ಕೆ ಅಗತ್ಯವಿರುವ ಆ್ಯಂಟಿಬಯೋಟಿಕ್‌ಗಳ ಶೇ.90 ರಷ್ಟನ್ನು ಚೀನಾ ಪೂರೈಸುತ್ತದೆ. ಲಾಕ್‌ಡೌನ್ ಮುಂದುವರಿದರೆ ಉದ್ಯಮದ ಗಂಭೀರ ಪರಿಣಾಮ ಬೀರಲಿದೆ.

ಶೇ.70 ಸರಕು ಜಲಸಾರಿಗೆಯಿಂದಲೇ ಆಮದು
ಫಾರ್ಮಾಸ್ಯುಟಿಕಲ್ಸ್ ಎಕ್ಸ್‌ಪೋರ್ಟ್‌ ಪ್ರಮೋಷನ್ ಕೌನ್ಸಿಲ್ (ಫಾರ್ಮೆಕ್ಸಿಲ್) ಮತ್ತು ಉತ್ತರ ಭಾರತದ ಸಿಐಐನ ನಿಯೋಜಿತ ಅಧ್ಯಕ್ಷರಾದ ದಿನೇಶ್ ದುವಾ, ಲಾಕ್‌ಡೌನ್ ಮುಂದುವರಿದರೆ ಪೂರೈಕೆ ನಿರ್ಬಂಧಗಳು ಎದುರಾಗಲಿವೆ. ಶೇ.20-30ರಷ್ಟು ಸರಕು ವಿಮಾನಗಳಿಂದ ಬರುತ್ತವೆ. ಶೇ.70ರಷ್ಟು ಸರಕು ಹಡಗಿನ ಮೂಲಕ ಬರುತ್ತವೆ. ವಿಮಾನದ ಮೂಲಕ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ತುಂಬಾ ದುಬಾರಿ. ಸರಕು ಸಾಗಣೆಯಲ್ಲಿ ವಾಯು ಮತ್ತು ಜಲಸಾರಿಗೆಯಲ್ಲಿ ಪ್ರತಿ ಕಿ.ಮೀ.ಗೆ 5 ರಿಂದ 10 ಡಾಲರ್ ವೆಚ್ಚದ ವ್ಯತ್ಯಾಸವಿರುತ್ತದೆ. ಕಂಟೇನರ್ ಲಭ್ಯತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಇದು ಔಷಧಿಗಳ ಕೊರತೆಗೆ ಕಾರಣವಾಗಬಹುದು. ಜೊತೆಗೆ ರಫ್ತಿನ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CRPF ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಕಾದಾರಿ ಮಹಿಳೆ

ಶಾಂಘೈನಿಂದ ಬಹಳಷ್ಟು ಸರಕುಗಳು ಭಾರತಕ್ಕೆ ಬರುತ್ತವೆ. ಶೆನ್‌ಜೆನ್ ಈಗಾಗಲೇ ತೊಂದರೆಗೆ ಒಳಗಾಗಿದೆ. ಅದನ್ನು ವಿಂಗಡಿಸದಿದ್ದರೆ ಅದು ಔಷಧಿ ಉದ್ಯಮಕ್ಕೆ ತುಂಬಾ ಸಂಕಷ್ಟ ಎದುರಾಗಲಿದೆ. ಲಾಜಿಸ್ಟಿಕ್ಸ್ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಹಡಗುಗಳು, ಕಂಟೈನರ್‌ಗಳು ಲಭ್ಯವಾಗುತ್ತಿಲ್ಲ. ಇದು ಖಂಡಿತವಾಗಿಯೂ ಔಷಧಿ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

covid child

ಪ್ಯಾರಸಿಟಮಲ್, ಹೃದಯರಕ್ತನಾಳದ ಔಷಧಗಳು (ಸಾರ್ಟಾನ್ಸ್), ಮಧುಮೇಹ ವಿರೋಧಿ ಔಷಧಗಳು (ಮೆಟ್‌ಫಾರ್ಮಿನ್), ಆಂಟಿಬಯೋಟಿಕ್ (ಸಿಪ್ರೊಫ್ಲೋಕ್ಸಾಸಿನ್, ಆಫ್ಲೋಕ್ಸಾಸಿನ್), ವಿಟಮಿನ್ಸ್ (ಆಸ್ಕೋರ್ಬಿಕ್ ಆಮ್ಲ), ಅಸಿಟೈಲ್ಸಲಿಸಿಲಿಕ್ ಆಮ್ಲ (ಆಸ್ಪಿರಿನ್) ನಂತಹ ಎಲ್ಲಾ ಪ್ರಮುಖ ಅಗತ್ಯ ಔಷಧಿಗಳಿಗೆ ಭಾರತವು ಚೀನಾವನ್ನು ಅವಲಂಬಿಸಿದೆ.

ಚೀನಾದ ಔಷಧೀಯ ಉದ್ಯಮದಲ್ಲಿ ಪರಿಚಿತವಾಗಿರುವ ಫಾರ್ಮಾ ತಜ್ಞ ಮೆಹುಲ್ ಶಾಹ್, ಸದ್ಯ ಯಾವುದೇ ಕೊರತೆ ಇಲ್ಲ. ನಾವು ಸಾಗಣೆಯನ್ನು ಪಡೆಯುವಲ್ಲಿ ಸ್ವಲ್ಪ ವಿಳಂಬವನ್ನು ಎದುರಿಸುತ್ತಿದ್ದೇವೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅನಿಶ್ಚಿತತೆ ಎದುರಾಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ

ಜಲಸಾರಿಗೆ ಮಹತ್ವವೇನು?
ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿ ನೋಡಿದರೆ ಹಡಗಿನ ಮುಖಾಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಾರಿ ಪ್ರಮಾಣದ ಸರಕುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದಾಗಿದೆ. ಹಾಗಾಗಿ ಬಂದರುಗಳು ಹಾಗೂ ಹಡಗು ಉದ್ಯಮಗಳು ದೇಶದ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *