Sunday, 22nd July 2018

Recent News

10ನೇ ಆಟಗಾರನನ್ನು ಔಟ್ ಮಾಡಲು 9 ಮಂದಿ ಸ್ಲಿಪ್ ನಲ್ಲಿ ಫೀಲ್ಡ್ ಮಾಡಿದ್ರು..!

ರಾಯ್‍ಪುರ: ಕ್ರಿಕೆಟ್ ಮ್ಯಾಚಲ್ಲಿ 9 ಆಟಗಾರರು ಸ್ಲಿಪ್ ನಲ್ಲಿ ನಿಂತು ಫೀಲ್ಡ್ ಮಾಡಿದ್ದನ್ನು ಇತ್ತೀಚಿನ ದಿನಗಳಲ್ಲಿ ನೀವು ಯಾವತ್ತಾದರೂ ನೋಡಿದ್ದೀರಾ..? ಈಗೀಗ ಹೆಚ್ಚು ಅಂದ್ರೆ 4 ಅಥವಾ 5 ಮಂದಿ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಬಂಗಾಳ ಮತ್ತು ಛತ್ತೀಸ್‍ಗಢ ನಡುವಿನ ರಣಜಿ ಪಂದ್ಯ ಇತ್ತೀಚಿನ ದಿನಗಳಲ್ಲಿ ಕಾಣದೇ ಇದ್ದ ಇಂತಹ ಕೆಲ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು. 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಆಟಗಾರನನ್ನು ಔಟ್ ಮಾಡಲು 9 ಮಂದಿ ಸ್ಲಿಪ್ ನಲ್ಲಿ ಫೀಲ್ಡ್ ಮಾಡಿದರು. ಈ ವೇಳೆ ಮೊಹಮ್ಮದ್ ಶಮಿ ಹಾಗೂ ಅಶೋಕ್ ದಿಂಡಾ ಬೌಲಿಂಗ್ ಮಾಡುತ್ತಿದ್ದರು.

ಗೆಲುವಿಗೆ ಒಂದು ವಿಕೆಟ್ ಗಳ ಅಗತ್ಯವಿದ್ದ ವೇಳೆ ಬಂಗಾಳ ತಂಡದ ನಾಯಕ ಮನೋಜ್ ತಿವಾರಿ ಶಮಿ ಹಾಗೂ ದಿಂಡಾ ಬೌಲಿಂಗ್ ಗೆ 9 ಆಟಗಾರರನ್ನು ಸ್ಲಿಪ್ ನಲ್ಲಿ ನಿಲ್ಲಿಸಿದ್ದರು. ಈ ಪಂದ್ಯದಲ್ಲಿ ಶಮಿ 8 ವಿಕೆಟ್ ಹಾಗೂ ದಿಂಡಾ 10 ವಿಕೆಟ್ ಪಡೆದು ಒಟ್ಟಾರೆ 18 ವಿಕೆಟ್ ಗಳಿಸಿದರು. ಈ ಪಂದ್ಯವನ್ನು ಬಂಗಾಳ ತಂಡ ಇನ್ನಿಂಗ್ಸ್ ಹಾಗೂ 160 ರನ್ ಗಳಿಂದ ಗೆದ್ದಿದೆ.

2ನೇ ಇನ್ನಿಂಗ್ಸ್‍ನಲ್ಲಿ ಛತ್ತೀಸ್ ಗಢ ತಂಡ ಕೇವಲ 259 ರನ್ ಗಳಿಗೆ ಆಲೌಟಾಯಿತು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ಬ್ಯಾಟ್ ಮಾಡಿದ ಬಂಗಾಳ ತಂಡ 7 ವಿಕೆಟ್ ನಷ್ಟಕ್ಕೆ 529 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಛತ್ತೀಸ್ ಗಢ ಮೊದಲ ಇನ್ನಿಂಗ್ಸ್ ನಲ್ಲಿ 110 ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ 259 ರನ್ ಗಳಿಸಿತು. ಅಶೋಕ್ ದಿಂಡಾ 47 ರನ್ ನೀಡಿ 10 ವಿಕೆಟ್ ಹಾಗೂ ಮೊಹಮ್ಮದ್ ಶಮಿ 105 ರನ್ ನೀಡಿ 8 ವಿಕೆಟ್ ಪಡೆದರು.

ಈ ಹಿಂದೆಯೂ ಹೀಗಾಗಿತ್ತು!: 1976-77ರಲ್ಲಿ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ ನ್ಯೂಜಿಲೆಂಡ್ ನ 11ನೇ ಆಟಗಾರ ಪೀಟರ್ ಫ್ಯಾಟ್ರಿಕ್ ಅವರನ್ನು ಔಟ್ ಮಾಡಲು 9 ಫೀಲ್ಡರ್ ಗಳನ್ನು ಸ್ಲಿಪ್ ನಲ್ಲಿ ನಿಲ್ಲಿಸಿದ್ದರು. 1999ರ ಅಕ್ಟೋಬರ್ 23ರಂದು ಜಿಂಬಾಬ್ವೆ ತಂಡದ ಆಟಗಾರನನ್ನು ಔಟ್ ಮಾಡಲು ಆಸ್ಟ್ರೇಲಿಯಾ ತಂಡ 9 ಸ್ಲಿಪ್ ಗಳನ್ನು ಬಳಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಂಗಾಳ ತಂಡದ ನಾಯಕ ಮನೋಜ್ ತಿವಾರಿ, ನಾನು ಯಾವುದೇ ಅವಕಾಶಗಳನ್ನು ಕೈಚೆಲ್ಲಲು ತಯಾರಿರಲಿಲ್ಲ. ಬ್ಯಾಟ್ ಅಂಚಿಗೆ ತಗುಲಿದ ಚೆಂಡನ್ನು ಬಿಡಬಾರದು ಎಂಬ ಕಾರಣಕ್ಕೆ ನಾನು 9 ಸ್ಲಿಪ್ ಫೀಲ್ಡಿಂಗ್ ನಿರ್ಧಾರ ಕೈಗೊಂಡೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *