ದಾವಣಗೆರೆ: ರಾಜೀನಾಮೆ ನೀಡಿ ಮುಂಬೈಗೆ ಹೋದವರು ಸಗಣಿ ತಿಂದು ಹೋಗಿದ್ದಾರೆ. ಅವರೇನು ಸಾಮೂಹಿಕವಾಗಿ ಹೋಗಿಲ್ಲ ಬಿಜೆಪಿಯವರೇ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ದಾವಣಗೆರೆಯ ಸ್ವಗೃಹದಲ್ಲಿ ಮಾತನಾಡಿದ ಅವರು, ಶುಕ್ರವಾರ ಅಧಿವೇಶನದಲ್ಲಿ ಬಿಜೆಪಿಯವರು 25 ಕೋಟಿ, 30 ಕೋಟಿ ಶಾಸಕರಿಗೆ ಕೊಟ್ಟಿದ್ದಾರೆ ಎಂದು ಎಲ್ಲವೂ ಬಹಿರಂಗವಾಗಿದೆ. ಸರ್ಕಾರ ಉರುಳೋದು, ಉಳಿಯೋದು ಸೋಮವಾರ ಫೈನಲ್ ಆಗಲಿದ್ದು, ಅತೃಪ್ತರು ವಾಪಸ್ ಬಂದರೆ ಸರ್ಕಾರ ಉಳಿಯುತ್ತೆ ಇಲ್ಲ ಎಂದರೆ ಉಳಿಯೋಲ್ಲಾ ಎನ್ನುವ ಮುನ್ಸೂಚನೆ ನೀಡಿದ್ದಾರೆ.
Advertisement
Advertisement
ಶಾಸಕರು ದುಡ್ಡು ತೆಗೆದುಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸಲು ಹೋಟೆಲಿನಲ್ಲಿ ಕೂತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 16 ಜನರಿಗೂ ಸಚಿವ ಸ್ಥಾನ ನೀಡುತ್ತಾರಾ. ನೀಡಿದ್ರೆ ಬಿಜೆಪಿ ಪಕ್ಷದಲ್ಲಿ ಇರುವವರು ಎಲ್ಲಿಗೆ ಹೋಗಬೇಕು. ಈಗ ನಮಗೆ ಆದ ಸ್ಥಿತಿ ಮುಂದೆ ಬಿಜೆಪಿಗೂ ಆಗುತ್ತೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಕೂಡ ಬಹಳ ದಿನ ಉಳಿಯೋಲ್ಲ ಎಂದು ಭವಿಷ್ಯ ನುಡಿದರು.
Advertisement
Advertisement
ಅಲ್ಲದೇ ಈಗ ಜೆಡಿಎಸ್, ಕಾಂಗ್ರೆಸ್ ಶಾಸಕರು ರೆಸಾರ್ಟ್‍ನಲ್ಲಿ ಇಟ್ಟಿರೋದು ಅವರನ್ನು ಕಾವಲು ಕಾಯೋಕೆ. ಏಕೆಂದರೆ ಓಡಿ ಹೋಗುವವರು ಇನ್ನು ಇದ್ದಾರೆ. ಅದಕ್ಕೆ, ನಾನು ಎಲ್ಲೂ ಹೋಗಲ್ಲ ಹಾಗಾಗಿ ದಾವಣಗೆರೆಗೆ ಬಂದಿದ್ದೇನೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಯಾರನ್ನಾದರೂ ಸಿಎಂ ಮಾಡಲಿ ನಮಗೇನು, ಅತೃಪ್ತರು ವಾಪಸ್ ಬಂದರೆ ಸಿಎಂ ಬದಲಾವಣೆ ಆಗೋಲ್ಲ. ಈಗಿನ ಸಿಎಂಯೇ ಮುಖ್ಯಮಂತ್ರಿ ಆಗಿರುತ್ತಾರೆ. ಆದರೆ ಬಿಜೆಪಿಯವರ ಕುದುರೆ ವ್ಯಾಪಾರ ಜೋರಾಗಿದೆ, ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಉಳಿಯುವುದಿಲ್ಲ, ಅತೃಪ್ತರು ಉಳಿಯಲು ಬಿಡುವುದಿಲ್ಲ ಎಂದರು.