– ಪಂಚಪೀಠಗಳ ಸ್ವಾಮೀಜಿಗಳಿಂದ ಅಂತಿಮ ವಿಧಿವಿಧಾನ
ದಾವಣಗೆರೆ: ರಾಜಕೀಯ ಮುತ್ಸದ್ದಿ, ದಾವಣಗೆರೆ ಧಣಿ, ಜನರಿಗಾಗಿಯೇ ಜೀವನ ಮುಡಿಪಿಟ್ಟ ಹಿರಿಯ ಜೀವ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಇಹ ಲೋಕ ತ್ಯಜಿಸಿದ್ದು, ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.
ದಾವಣೆಗೆರೆಯ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಣ್ಣಿನ ಬದಲಿಗೆ ವಿಭೂತಿ ಗಟ್ಟಿಗಳೊಂದಿಗೆ ಪಂಚಪೀಠದ ಸ್ವಾಮೀಜಿಗಳು ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದರು. ಶಾಮನೂರು ಪುತ್ರ ಎಸ್.ಎಸ್ ಮಲ್ಲಿಕಾರ್ಜುನ ಅವರೂ ಇದರಲ್ಲಿ ಪಾಲ್ಗೊಂಡರು.
ಅಂತ್ಯಕ್ರಿಯೆಯ ವೇಳೆ ಶಾಮನೂರರ ಪಾರ್ಥಿವ ಶರೀರಕ್ಕೆ ಪೊಲೀಸರು ತ್ರಿವರ್ಣ ಧ್ವಜ ಹೊದಿಸಿ ಗೌರವ ಸೂಚಿಸಿದರು, ಇದಾದಮೇಲೆ ಶಾಮನೂರು ಪುತ್ರ ಧ್ಚಜ ಸ್ವೀಕರಿಸಿದರು. ನಂತರ ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಬಳಿಕ ವಾದ್ಯವಂದನೆ ಅರ್ಪಿಸಿ, ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ರಾಜಕೀಯ ಗಣ್ಯರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಜೆ ಜಾರ್ಜ್, ಆರ್.ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಸುಧಾಕರ್, ಈಶ್ವರ್ ಖಂಡ್ರೆ, ಬಸವರಾಜ ರಾಯರಡ್ಡಿ, ವಿಜಯಾನಂದ ಕಾಶಪ್ಪನವರ್, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ ರವಿ, ಸಿರಿಗೆರೆ ಶ್ರೀಗಳು, ವಚನಾನಂದಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಚರ್ಚ್ ಪಾದ್ರಿಗಳು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಸ್ಥಳೀಯ ಪೊಲೀಸ್ ಇಲಾಖೆಯಿಂದ ವಿಐಪಿಗಳಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ಅಂತಿಮ ಸಿದ್ಧತೆ ಹೇಗಿತ್ತು?
ಮಾವನ ಅಂತ್ಯಸಂಸ್ಕಾರಕ್ಕೆ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರು ನಂದಾದೀಪ ಹಿಡಿದು ತಂದರು. ಕುಟುಂಬಸ್ಥರು ಬಿಲ್ವಪತ್ರೆ, ಬಾಳೆ ಎಲೆ, ವಿಭೂತಿಯ ಸಿದ್ಧತೆ ಮಾಡಿಕೊಂಡಿದ್ದರು. ಇದರೊಂದಿಗೆ ಸಿದ್ಧಗಂಗಾ ಮಠದಿಂದ 100 ವಿಭೂತಿಗಟ್ಟಿಗಳನ್ನೂ ಕಳಿಸಿಕೊಡಲಾಗಿತ್ತು. ಬಿದಿರು ಪಲ್ಲಕ್ಕಿಯಲ್ಲಿ ಪಾರ್ಥೀವ ಶರೀರ ಅಂತ್ಯಕ್ರಿಯೆಯ ಸ್ಥಳ ತಲುಪುತ್ತಿದ್ದಂತೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ಜರುಗಿದವು. ಇಹಲೋಕ ತ್ಯಜಿಸಿದವರಿಗೆ ಮೋಕ್ಷಸಿಗಲಿ ಎನ್ನುವ ನಿಟ್ಟಿನಲ್ಲಿ ಅರ್ಚಕರು ವಿಧಿವಿಧಾನ ನೆರವೇರಿಸಿದರು.
ಪಾರ್ಥೀವ ಶರೀರ ಮೆರವಣಿಗೆ
ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಮಧ್ಯರಾತ್ರಿ ಹೊರಟಿದ್ದ ಮೃತದೇಹ ಇಂದು ಬೆಳಗ್ಗೆ 4 ಗಂಟೆಯ ವೇಳೆಗೆ ದಾವಣಗೆರೆಗೆ ತಲುಪಿತು. ಮೊದಲು ಹಿರಿಯ ಮಗ ಎಸ್ಎಸ್ ಬಕ್ಕೇಶ್ ನಿವಾಸ ನಂತರ ಎಸ್.ಎಸ್ ಗಣೇಶ ಮನೆ, ಕೊನೆಗೆ 3ನೇ ಮಗ ಸಚಿವ ಎ.ಎಸ್ ಮಲ್ಲಿಕಾರ್ಜುನ್ ಮನೆಯಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಮ್ಮುಖದಲ್ಲಿ ವಿಧಿ ವಿಧಾನ ನಡೆಯಿತು. ಮೂರು ಮನೆಗಳಲ್ಲಿ ವಿಧಿ ವಿಧಾನ ಮುಕ್ತಾಯದ ನಂತರ ಶಾಮನೂರು ಶಿವಶಂಕರಪ್ಪ ನಿವಾಸದ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಸಾರ್ವಜನಿಕರ ದರ್ಶನ ಮುಕ್ತಾಯದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್ ಮಿಲ್‌ವರೆಗೆ ಅಂತಿಮ ಯಾತ್ರೆ ನಡೆಯಿತು. ಹಳೇ ಕೋರ್ಟ್ ಮೈದಾನ, ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಾಸ್ಥಾನ, ಹಗೆದಿಬ್ಬಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನದ ಮುಂಭಾಗ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ಮೂಲಕ ಕಲ್ಲೇಶ್ವರ ರೈಸ್ ಮಿಲ್‌ಗೆ ತರಲಾಯಿತು.
ನೆಚ್ಚಿನ ಜನನಾಯಕನ್ನ ಕಳೆದುಕೊಂಡ ಜನರಲ್ಲಿ ಮೌನ
ಇನ್ನೂ ಪಾರ್ಥೀವ ಶರೀರ ಮೆರವಣಿಗೆ ಹಿನ್ನೆಲೆ ಮಾರ್ಗದುದ್ದಕ್ಕೂ ಶಾಮನೂರರ ಫ್ಲೆಕ್ಸ್‌ಗಳನ್ನ ಅಳವಡಿಸಲಾಗಿತ್ತು. ಕ್ಷೇತ್ರದ ನೆಚ್ಚಿನ ಜನನಾಯಕನನ್ನ ಕಳೆದುಕೊಂಡು ಜನ ಕಣ್ಣೀರು ಹಾಕಿದ್ರು. ಇನ್ನೂ ಕೆಲವರು ಪಾರ್ಥೀವ ಶರೀರವಿದ್ದ ವಾಹನಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ರು.







