ಕ್ರಿಯೇಟಿವ್ ಕಾರ್ಯಕ್ರಮಗಳ ರುಚಿಹತ್ತಿಸಲಿದೆ ಯೂಟ್ಯೂಬ್ ಚಾನೆಲ್!
ಪಾಪ ಪಾಂಡು ಧಾರಾವಾಹಿಯ ಪಾಚು ಶ್ರೀಮತಿಯಾಗಿ, ಬಿಗ್ ಬಾಸ್ ಶೋನ ಸ್ಪರ್ಧಿಯಾಗಿ ಮತ್ತು ಇತ್ತೀಚಿನ ದಿನಗಳಲ್ಲಿ ಥರಥರದ ಪಾತ್ರಗಳ ಮೂಲಕ ಹಿರಿತೆರೆಯಲ್ಲಿಯೂ ಸಕ್ರೀಯರಾಗಿರುವವರು ಶಾಲಿನಿ. ತಮ್ಮದೇ ಶೈಲಿಯ ನಿರೂಪಣೆಯ ಮೂಲಕ ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ಛಾಪು ಮೂಡಿಸಿರುವ ಶಾಲಿನಿ ಇದೀಗ ಕಿರುತೆರೆ ಮತ್ತು ಹಿರಿತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ಒತ್ತಡದ ನಡುವೆಯೂ ವರ್ಷಾಂತರದ ಕನಸೊಂದನ್ನು ಅವರು ನನಸಾಗಿಸಿಕೊಳ್ಳುವ ಖುಷಿಯಲ್ಲಿದ್ದಾರೆ. ಅಂದಹಾಗೆ ಶಾಲಿನಿ ‘ಶಾಲಿವುಡ್’ ಎಂಬ ಯೂಟ್ಯೂಬ್ ಚಾನೆಲ್ ಶುರುಮಾಡಲು ಅಂತಿಮ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.
Advertisement
ಈ ಹೊಸ ಯೂಟ್ಯೂಬ್ ಚಾನೆಲ್‍ಗೆ ಶಾಲಿನಿ ಅವರು ನಾಮಕರಣ ಮಾಡಿರುವ ರೀತಿಯೇ ಎಲ್ಲರಿಗೂ ಹಿಡಿಸುವಂತಿದೆ. ಶಾಲಿವುಡ್ ಎಂಬ ಹೆಸರೇ ಗೆಲುವು ಮತ್ತು ಕ್ರಿಯೇಟಿವಿಟಿಯ ಸೂಚನೆಗಳನ್ನು ಹೊಮ್ಮಿಸುತ್ತಿದೆ. ಹಾಗಾದರೆ ಈ ಯೂ ಟ್ಯೂಬ್ ಚಾನೆಲ್‍ನ ರೂಪುರೇಷೆಗಳೇನು? ಅದರಲ್ಲಿ ಯಾವ್ಯಾವ ಕಾರ್ಯಕ್ರಮಗಳು ಮೂಡಿ ಬರಲಿವೆ? ಅದಕ್ಕಾಗಿ ಹೇಗೆಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಅನ್ನೋದರ ಬಗ್ಗೆ ಶಾಲಿನಿ ಇಂಚಿಂಚು ವಿವರಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಈ ಮೂಲಕ ಬಹು ಕಾಲದಿಂದ ಉಸಿರಾಗಿಸಿಕೊಂಡಿದ್ದ ಕನಸಿನ ಪದರುಗಳನ್ನು ತೆರೆದಿಟ್ಟಿದ್ದಾರೆ.
Advertisement
ಶಾಲಿವುಡ್ ಅನ್ನು ಯಾರಿಗೇ ಆದರೂ ಫೆಶ್ ಅನ್ನಿಸುವಂಥಾ ವೆರೈಟಿ ವೆರೈಟಿ ಕಾರ್ಯಕ್ರಮಗಳಿಂದ ಸಿಂಗಾರ ಮಾಡಲು, ಈ ಮೂಲಕ ಪ್ರೇಕ್ಷಕರಿಗೆ ಹೊಸತನದ ಕಾರ್ಯಕ್ರಮಗಳನ್ನು ಉಣಬಡಿಸಲು ಶಾಲಿನಿ ಸನ್ನದ್ಧರಾಗಿದ್ದಾರೆ. ಶಾಲಿನಿ ಯಾವುದೇ ಕಾರ್ಯಕ್ರಮ ನಡೆಸಿಕೊಟ್ಟರೂ ಅಲ್ಲೊಂದು ಲವ ಲವಿಕೆ ಇರುತ್ತದೆ. ಯುವ ಸಮುದಾಯದಿಂದ ಮೊದಲ್ಗೊಂಡು ಎಲ್ಲ ವಯೋಮಾನದವರನ್ನೂ ಮಾತಿನ ಶೈಲಿಯಿಂದಲೇ ಮರುಳಾಗಿಸೋ ಕಲೆಯೂ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕರಲ್ಲಿ ತಮ್ಮ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಹೊಳಪುಗಟ್ಟಿಸುವಂತೆ ಶಾಲಿನಿ ಶಾಲಿವುಡ್‍ನ ಕಾರ್ಯಕ್ರಮಗಳಿಗೆ ರೂಪುರೇಷೆ ಹಾಕಿಕೊಂಡಿದ್ದಾರೆ.
Advertisement
Advertisement
ಮೊದಲಿಗೆ ಶಾಲಿನಿ ತಮ್ಮ ಚಾನೆಲ್‍ನಲ್ಲಿ ಪುಟ್‍ಪುಟ್ಟ ಮುದ್ದು ಮಕ್ಕಳ ಕಲರವದ ಮೂಲಕವೇ ಕಳೆತುಂಬುವ ನಿರ್ಧಾರ ಮಾಡಿದ್ದಾರೆ. ಕಿರಿಕ್ ಪಾರ್ಟಿ ಹೆಸರಿನ ಈ ಶೋನಲ್ಲಿ ಪುಟ್ಟ ಮಕ್ಕಳ ತೊದಲು ಮಾತುಗಳಲ್ಲಿಯೇ ಪ್ರತಿ ಪ್ರೇಕ್ಷಕರ ಮನಗೆಲ್ಲುವ ಇರಾದೆಯೊಂದಿಗೆ ಚೆಂದದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮವನ್ನೂ ಕೂಡಾ ಚಿತ್ರೀಕರಿಸಿಕೊಳ್ಳಲಾಗಿದೆ. ಯಾವ ಕಿಸುರೂ ಇಲ್ಲದ ತಾಜಾತಾಜ ಮನಸ್ಸುಗಳ ಮನೋಲೋಕಕ್ಕೆ ಲಗ್ಗೆಯಿಡುವ ಈ ಕಾರ್ಯಕ್ರಮದ ಪ್ರೋಮೋ ಕೂಡಾಈಗಾಗಲೇ ಬಿಡುಗಡೆಗೊಂಡಿದೆ. ಇನ್ನುಳಿದಂತೆ ಸೌಂದರ್ಯ ಸಂಬಂಧಿ ಕಾರ್ಯಕ್ರಮಗಳಿಂದ ಹಿಡಿದು ಎಲ್ಲ ಥರದ ಪ್ರೋಗ್ರಾಮುಗಳಿಗೂ ಶಾಲಿನಿ ತಯಾರಾಗಿದ್ದಾರೆ.
ಇಲ್ಲಿ ಎಲ್ಲ ಇದೆ ಎಂದ ಮೇಲೆ ಸಿನಿಮಾದ ಹಾಜರಿ ಇಲ್ಲದಿರಲು ಸಾಧ್ಯವೇ? ಹೇಳಿಕೇಳಿ ಸಿನಿಮಾ ಎಂಬುದು ಶಾಲಿನಿಯವರ ಪ್ರಧಾನ ಆಸಕ್ತಿ. ಈ ಬಗೆಗಿನ ಅಪರೂಪದ ಕಾರ್ಯಕ್ರಮಗಳನ್ನು ರೂಪಿಸಲು ಅವರು ತಯಾರಾಗುತ್ತಿದ್ದಾರೆ. ಈ ತಲೆಮಾರಿನ ನಟ ನಟಿಯರು ನಿರ್ದೇಶಕರುಗಳನ್ನು ಮಾತ್ರವಲ್ಲದೇ ಹಳಬರನ್ನೂ ಮುಖಾಮುಖಿಯಾಗೋ ಇರಾದೆ ಶಾಲಿನಿಯವರದ್ದಾಗಿದೆ. ತುಂಬಾನೇ ಹೊಸತೆನ್ನಿಸುವಂಥಾ, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳೇ ಥ್ರಿಲ್ಲ ಆಗುವಂತೆ ಶಾಲಿವುಡ್‍ನ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿರಬೇಕೆಂಬುದು ಶಾಲಿನಿ ಅವರ ಬಯಕೆ. ಶಾಲಿವುಡ್ ಎಂಬ ಹೆಸರಿನಷ್ಟೇ ಆಕರ್ಷಕವಾದ ಕಾರ್ಯಕ್ರಮಗಳನ್ನು ಅವರೀಗಾಗಲೇ ಪಟ್ಟಿ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಬಿಗ್‍ಬಾಸ್ ಶೋ ಮುಗಿಸಿಕೊಂಡ ಕ್ಷಣದಲ್ಲಿಯೇ ಶಾಲಿನಿ ಈ ಯೂಟ್ಯೂಬ್ ಚಾನೆಲ್ ಶುರು ಮಾಡುವ ನಿರ್ಧಾರಕ್ಕೆ ಬಂದಿದ್ದರಂತೆ. ಈಗ್ಗೆ ಒಂದೂವರೆ ವರ್ಷದ ಹಿಂದೆಯೇ ಅದಕ್ಕೆ ಶಾಲಿವುಡ್ ಎಂಬ ಟೈಟಲ್ ಅನ್ನೂ ನಿಕ್ಕಿ ಮಾಡಿಕೊಳ್ಳಾಗಿತ್ತು. ಕೇಸರಿ ವರ್ಣದ ಹನುಮಾನ್ ಚಿತ್ರದ ಮೂಲಕ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ಕರಣ್ ಆಚಾರ್ಯ ಶಾಲಿವುಡ್ ಲೋಗೋವನ್ನೂ ರೂಪಿಸಿ ಕೊಟ್ಟಿದ್ದರಂತೆ. ಆದರೆ ಬೇರೆ ಬೇರೆ ಕಾರ್ಯಕ್ರಮ, ನಟನೆಯಲ್ಲಿ ಬ್ಯುಸಿಯಾದ ಪರಿಣಾಮವಾಗಿ ಶಾಲಿವುಡ್ ಕನಸು ಮುಂದೂಡಲ್ಪಡುತ್ತಿರೋದರ ಬಗ್ಗೆ ಶಾಲಿನಿಯವರಿಗೇ ಬೇಸರವಿತ್ತು.
ಈ ವರ್ಷದ ಆರಂಭವನ್ನವರು ಶಾಲಿವುಡ್ ಎಂಬ ಕನಸಿನೊಂದಿಗೇ ಎದುರುಗೊಂಡಿದ್ದಾರೆ. ಆನವರಿ ಇಪ್ಪತ್ತರಂದು ಅವರ ಪತಿಯ ಹುಟ್ಟುಹಬ್ಬದಂದೇ ಶಾಲಿವುಡ್ ಯೂಟ್ಯೂಬ್ ಚಾನೆಲ್ ಅನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಆ ನಂತರ ಮತ್ಯಾವುದರತ್ತಲೂ ಗಮನ ಹರಿಸದೇ ಈ ಚಾನೆಲ್ ಅನ್ನು ರೂಪಿಸುವತ್ತಲೇ ತಮ್ಮ ಸಮಯವನ್ನೆಲ್ಲ ಶಾಲಿನಿ ಮುಡಿಪಾಗಿಟ್ಟಿದ್ದಾರೆ. ಇದೀಗ ಈ ಚಾನೆಲ್‍ನ ಎಲ್ಲ ಕೆಲಸ ಕಾರ್ಯಗಳೂ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಇದೇ ತಿಂಗಳ ಹದಿನಾಲಕ್ಕನೇ ತಾರೀಕು ಪ್ರೇಮಿಗಳ ದಿನದಂದು ಅಥವಾ ಅದರ ಆಸು ಪಾಸಲ್ಲಿಯೇ ಶಾಲಿವುಡ್‍ಗೆ ಚಾಲನೆ ನೀಡಲು ಶಾಲಿನಿ ನಿರ್ಧರಿಸಿದ್ದಾರೆ. ಇದು ಕನ್ನಡ ಪ್ರೇಕ್ಷಕರಿಗೆ ಖಂಡಿತಾ ಶುಭ ಸುದ್ದಿ.